ಚಿಕ್ಕಮಗಳೂರು: ಜಿಲ್ಲೆಯ ಕೆಮ್ಮನಗುಂಡಿಯ ಹೆಬ್ಬೆ ಜಲಪಾತದಲ್ಲಿ ಮುಳುಗಿ 25 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.ಹೈದರಾಬಾದ್ ಮೂಲದ ಶ್ರವಣ್ ತನ್ನ ಸ್ನೇಹಿತನೊಂದಿಗೆ ರಮಣೀಯ ಸ್ಥಳಗಳನ್ನು ವೀಕ್ಷಿಸಲು ಚಿಕ್ಕಮಗಳೂರಿಗೆ ಬಂದಿದ್ದರು. ಇಬ್ಬರು ಬಾಡಿಗೆಗೆ ಬೈಕ್ ತೆಗೆದುಕೊಂಡು ವಿವಿಧ ಸ್ಥಳಗಳಿಗೆ ತೆರಳಿದ್ದರು.
ಕೆಲವೆಡೆ ಭೇಟಿ ನೀಡಿದ ಬಳಿಕ ಸೋಮವಾರ ಹೆಬ್ಬೆ ಜಲಪಾತ ತಲುಪಿದ್ದರು.’ಮುಂಗಾರು ಮಳೆಯಿಂದಾಗಿ, ಜಲಪಾತವು ತುಂಬಿ ಹರಿಯುತ್ತಿದೆ. ಜಲಪಾತ ತುಂಬಾ ಆಳವಾಗಿರಲಿಲ್ಲವಾದರೂ, ಬಂಡೆಗಳು ತುಂಬಾ ಜಾರುತ್ತಿದ್ದವು. ಅವರಿಗೆ ಈಜು ಬರುತ್ತಿರಲಿಲ್ಲವಾದರೂ, ನೀರಿಗೆ ಇಳಿಯಲು ನಿರ್ಧರಿಸಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರವಣ್ ಕಾಲು ಜಾರಿ ನೀರಿನಲ್ಲಿ ಮುಳುಗಲು ಪ್ರಾರಂಭಿಸಿದ್ದಾನೆ. ಈ ವೇಳೆ ಆತನ ಸ್ನೇಹಿತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೂಡಲೇ ಅಕ್ಕಪಕ್ಕದಲ್ಲಿದ್ದವರು ಶ್ರವಣ್ ಅವರನ್ನು ರಕ್ಷಿಸಿದ್ದಾರೆ.’ಆತನನ್ನು ಹೊರಗೆ ತರುವಾಗ ಇನ್ನೂ ಜೀವಂತವಾಗಿದ್ದನು. ಹೆಬ್ಬೆ ಜಲಪಾತದ ಬಳಿ ಸಂದರ್ಶಕರಲ್ಲಿ ಒಬ್ಬ ವೈದ್ಯರಿದ್ದರು, ಅವರು ಆತನನ್ನು ಬದುಕಿಸಲು ಪ್ರಯತ್ನಿಸಿದ್ದಾರೆ.
ನಂತರ ಆತನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆ ವೇಳೆಗಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ’ ಎಂದು ಅಧಿಕಾರಿ ಹೇಳಿದ್ದಾರೆ.ಶ್ರವಣ್ ಇ-ಕಾಮರ್ಸ್ ಸಂಸ್ಥೆಯೊಂದರಲ್ಲಿ ಸಿಸ್ಟಮ್ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.