This is the title of the web page
This is the title of the web page

ಚುನಾವಣಾ ಅಧಿಕಾರಿಗಳಿಂದ ತಾರತಮ್ಯ: ಆಮ್ ಆದ್ಮಿ ಪಾರ್ಟಿ ಆರೋಪ ನಟ ಸುದೀಪ್ ಖರ್ಚು ಯಾರ ಲೆಕ್ಕಕ್ಕೆ?: ಎಎಪಿ ಪ್ರಶ್ನೆ

ಬೆಂಗಳೂರು: ಸ್ಥಳೀಯ ಚುನಾವಣಾ ಅಧಿಕಾರಿಗಳು ಬಿಜೆಪಿ ಪರವಾಗಿ ವರ್ತಿಸುತ್ತಿದ್ದು, ಆಮ್ ಆದ್ಮಿ ಪಾರ್ಟಿ ವಿರುದ್ಧ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ವಕೀಲರ ಘಟಕದ ಸದಸ್ಯರಾದ ಗಂಗಾಧರ್ ಆರೋಪಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗಂಗಾಧರ್, ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳಿಗೆ ಬಿಜೆಪಿ ಅಭ್ಯರ್ಥಿಗಳು ತೊಂದರೆ ನೀಡುತ್ತಿದ್ದಾರೆ.

ಜೊತೆಗೆ, ಚುನಾವಣಾ ಅಧಿಕಾರಿಗಳು ಕೂಡತಾರತಮ್ಯ ಮಾಡುತ್ತಿದ್ದಾರೆ. ಎಎಪಿ ಮುಖಂಡರುನೀಡುವ ದೂರುಗಳಿಗೆ ಚುನಾವಣಾ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ. ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಸಮ್ಮತ ಚುನಾವಣೆಗೆ ಅವಕಾಶ ಮಾಡಿಕೊಡಬೇಕು? ಎಂದು ಆಗ್ರಹಿಸಿದರು.

ಬೆಂಗಳೂರಿನ ಗಾಂಧಿನಗರ, ಬೆಂಗಳೂರು ದಕ್ಷಿಣ, ಮಹಾಲಕ್ಷ್ಮೀ ಲೇಔಟ್,ರಾಜರಾಜೇಶ್ವರಿನಗರ ಕ್ಷೇತ್ರಗಳಲ್ಲಿ ಆರ್‍ಒಗಳು
ಎಎಪಿಗೆ ನೋಟಿಸ್‍ಗಳನ್ನು ನೀಡಿ ಕಿರುಕುಳನೀಡುತ್ತಿದ್ದಾರೆ. ಮನೆಮನೆಗೆ ತೆರಳಿ ಪ್ರಚಾರ ಮಾಡುವುದಕ್ಕೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಮನೆಮನೆ ಪ್ರಚಾರಕ್ಕೂ ಅವಕಾಶ ನೀಡದಿದ್ದರೆ ಪ್ರಚಾರ ಮಾಡುವುದು ಹೇಗೆ? ಮನೆಮನೆ ಪ್ರಚಾರಕ್ಕೆ 48 ಗಂಟೆ ಕಾಲ ಮೊದಲೇ ಎಲ್ಲ ವಿವರಗಳನ್ನು ನೀಡಿ ಅನುಮತಿ ಪಡೆಯಬೇಕೆಂದು ಹೇಳುತ್ತಿದ್ದಾರೆ.

ಬೆಂಗಳೂರಿನಂತಹ ನಗರಗಳಲ್ಲಿ ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳ ವೈಯಕ್ತಿಕ ಖಾತೆಗಳಲ್ಲಿ ಜಾಹೀರಾತಲ್ಲದ ಪೋಸ್ಟ್ ಹಾಕುವುದಕ್ಕೂ ಚುನಾವಣಾ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ? ಎಂದು ಗಂಗಾಧರ್ ಬೇಸರ ವ್ಯಕ್ತಪಡಿಸಿದರು.

ಯಾದಗಿರಿ ಜಿಲ್ಲೆಯ ಸುರಪುರ ವಿಧಾನ ಸಭಾ ಕ್ಷೇತ್ರದ ತೋಳದಿನ್ನೆ ಗ್ರಾಮದಲ್ಲಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಶಾಂತಿಯುತವಾಗಿ ಬೀದಿಸಭೆ ನಡೆಸುತ್ತಿದ್ದರು. ಅಲ್ಲಿಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ನಮ್ಮವರ ಮೇಲೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಚುನಾವಣಾ ಆಯೋಗ, ಪೊಲೀಸರು ಏನು ಕ್ರಮ ಕೈಗೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಅಧಿಕಾರಿಗಳು ಹಾಗೂ ಪೊಲೀಸರು ಆಡಳಿತ ಪಕ್ಷದ ಪರ ಕೆಲಸ ಮಾಡುವುದು ಸರಿಯಲ್ಲ? ಎಂದು ಗಂಗಾಧರ್ ಹೇಳಿದರು.
ಖ್ಯಾತ ನಟ ಸುದೀಪ್‍ರವರು ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಮಾತ್ರ ಮತಯಾಚನೆ ಮಾಡುವುದೆಂದು ಹೇಳಿದ್ದರು.

ಅಧಿಕೃತ ಸ್ಟಾರ್ ಪ್ರಚಾರಕದ ಪಟ್ಟಿಯಲ್ಲಿ ಸುದೀಪ್ ಹೆಸರಿಲ್ಲ. ಆದರೂ ಏಪ್ರಿಲ್ 26ರಂದು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ತಿಪ್ಪೇಸ್ವಾಮಿ ಪರ ಸುದೀಪ್ ಪ್ರಚಾರ ಮಾಡಿದ್ದಾರೆ. ಹೆಲಿಕಾಪ್ಟರ್ ಮೂಲಕ ತೆರಳಿ, ಐಶಾರಾಮಿ ಕಾರುಗಳಲ್ಲಿ ತಿರುಗಾಡಿದ್ದಾರೆ. ಇದಕ್ಕೆಲ್ಲ ಕನಿಷ್ಠ 15ರಿಂದ 40 ಲಕ್ಷ ರೂಪಾಯಿಯಾದರೂ ಖರ್ಚಾಗಿರುತ್ತದೆ. ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತಿದೆ ಹಾಗೂ ಈ ಖರ್ಚುಗಳನ್ನು ಚುನಾವಣಾ ಆಯೋಗವು ಯಾರ ಲೆಕ್ಕಕ್ಕೆ ಸೇರಿಸುತ್ತದೆ ಎಂದು ಗಂಗಾಧರ್ ಪ್ರಶ್ನಿಸಿದರು.

ಆಮ್ ಆದ್ಮಿ ಪಾರ್ಟಿಯ ರಾಜ್ಯ ವಕೀಲರ ಘಟಕದ ಅಧ್ಯಕ್ಷರಾದ ನಂಜಪ್ಪ ಕಾಳೇಗೌಡ ಹಾಗೂ ಗೋವಿಂದರಾಜನಗರ ಕ್ಷೇತ್ರದ ಅಭ್ಯರ್ಥಿ ಅಂಜನಾ ಗೌಡ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.