ಬೆಂಗಳೂರು: ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಓದಿದ 1,414 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಸ್ಪೆಷಲೈಸ್ಡ್ ಎಕ್ಸೆಲೆನ್ಸ್ (ಎಸ್ಒಎಸ್ಇ) ಶಾಲೆಯಲ್ಲಿ ವಿದ್ಯಾರ್ಹತೆ ಪಡೆದ 255 ಅಭ್ಯರ್ಥಿಗಳ ಪೈಕಿ 243 ಅಭ್ಯರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 95.2 ರಷ್ಟು ಸಾಧನೆ ಮಾಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರ ದೆಹಲಿಯ ಸರ್ಕಾರಿ ಶಾಲೆಗಳನ್ನು ಅತ್ಯುನ್ನತ ಶಿಕ್ಷಣ ಸಂಸ್ಥೆಗಳನ್ನಾಗಿ ಮಾರ್ಪಡಿಸಿದ್ದರ ಫಲವಿದು. ಇದೊಂದು ಮಹತ್ವದ ಶಿಕ್ಷಣ ಕ್ರಾಂತಿಯಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಸಂತಸ ವ್ಯಕ್ತ ಪಡಿಸಿದ್ದಾರೆ.
ನೀಟ್ ಫಲಿತಾಂಶದ ಹಿನ್ನೆಲೆ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಗದೀಶ್ ಸದಂ, 2020ರಲ್ಲಿ ದೆಹಲಿ ಸರ್ಕಾರಿ ಶಾಲೆಗಳಲ್ಲಿ ಓದಿದ 569 ಅಭ್ಯರ್ಥಿಗಳಷ್ಟೇ ನೀಟ್ ಅರ್ಹತೆ ಪಡೆದಿದ್ದರು.
ಕೇವಲ ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆ 1414ಕ್ಕೆ ಏರಿಕೆಯಾಗಿದೆ. ಕೇಜ್ರಿವಾಲ್ ಅವರು ಬಡವರ ಮಕ್ಕಳೂ ಜೆಇಇ, ನೀಟ್ನಂತಹ ಉನ್ನತ ಪರೀಕ್ಷೆಗಳನ್ನು ಎದುರಿಸುವ ಮೂಲಕ ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡುವಂತಾಗಬೇಕು ಎಂಬ ಕಾರಣಕ್ಕೆ ಖಾಸಗಿ ಸಂಸ್ಥೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಗಳನ್ನು ಬೆಳೆಸಿದ್ದಾರೆ. ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದ್ದರಿಂದ ವರ್ಷದಿಂದ ವರ್ಷಕ್ಕೆ ನೀಟ್ ಉತ್ತೀರ್ಣರಾದ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಪಟ್ಟಿ ಬೆಳೆಯುತ್ತ ಹೋಗುತ್ತಿದೆ. ಕಳೆದ ವರ್ಷ 1,361 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
ಇದು ದೇಶಕ್ಕೆ ಮಾದರಿಯಾಗಿದ್ದು, ಈ ಸಾಧನೆಯನ್ನು ಮನಗಂಡು ಬಿಬಿಎಂಪಿ ಶಾಲೆಗಳನ್ನು ಅತ್ಯುನ್ನತ ಶಿಕ್ಷಣ ಸಂಸ್ಥೆಗಳನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಸರ್ಕಾರಿ ಶಾಲಾ- ಕಾಲೇಜುಗಳು ಹಾಗೂ ಬಿಬಿಎಂಪಿ ಶಾಲೆಯ ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಕನ್ನಡ ವಿಷಯದಲ್ಲೇ ಫೇಲ್ ಆಗುತ್ತಿದ್ದಾರೆ.
ಆದರೂ ಎಚ್ಚೆತ್ತುಕ್ಕೊಳ್ಳದ ರಾಜ್ಯ ಸರ್ಕಾರ ಈ ಶಾಲೆಗಳಿಗೆ ಸೆಕ್ಯೂರಿಟಿ ಏಜೆನ್ಸಿಗಳ ಮೂಲಕ ಶಿಕ್ಷಕರನ್ನು ನೇಮಿಸಲು ಮುಂದಾಗುತ್ತಿದೆ. ಮಕ್ಕಳ ಶೈಕ್ಷಣಿಕ ಪ್ರವಾಸ, ವಾರ್ಷಿಕೋತ್ಸವ, ಪರೀಕ್ಷೆ ವೆಚ್ಚಕ್ಕೆ ಸರ್ಕಾರ ನೀಡುವ ಧನಸಹಾಯವನ್ನು ಲೂಟಿ ಮಾಡಲಾಗುತ್ತಿದೆ. ಈಗಾಗಲೇ ತರಗತಿಗಳು ಆರಂಭವಾಗಿವೆ. ಆದರೆ ಶಿಕ್ಷಕರ ನೇಮಕಾತಿಯಾಗಿಲ್ಲ. ಇಂತಹ ಅಧ್ವಾನಗಳ ನಡುವೆ ಸರ್ಕಾರಿ ಶಾಲೆ ಮಕ್ಕಳು ಭವಿಷ್ಯದಲ್ಲಿ ಸಾಧನೆ ತೋರಲು ಹೇಗೆ ಸಾಧ್ಯ?, ಈ ಬಾರಿ ಬಿಬಿಎಂಪಿ ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯಲ್ಲೂ ಭಾರಿ ಇಳಿಕೆಯಾಗಿದೆ.
ಒಂದು ಕಡೆ ರಾಜ್ಯದ ಶಾಸಕರೊ?ಬ್ಬರು ಪ್ರತಿಷ್ಠಿತ ನೀಟ್ ಸಂಸ್ಥೆಯನ್ನು ಸ್ಥಾಪಿಸಿ ವರ್ಷಪೂರ್ತಿ ನೂರಾರು ಕೋಟಿ ಆದಾಯಗಳಿಸುತ್ತಿದ್ದರೆ ಮತ್ತೊಂದು ಕಡೆ ಖಾಸಗಿ ಸಂಸ್ಥೆಗಳ ಲಾಬಿಗೆ ಒಳಗಾಗಿರುವ ರಾಜ್ಯ ಸರ್ಕಾರ ಕಳೆಪೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮುಗಿಸುತ್ತಿದೆ.ಬಡವರ ಮಕ್ಕಳ ಭವಿಷ್ಯವನ್ನ ಕಸಿದುಕೊಳ್ಳುತ್ತಿದೆ ಎಂದು ಜಗದೀಶ್ ವಿ. ಸದಂ ಆಕ್ರೋಶ ವ್ಯಕ್ತಪಡಿಸಿದರು.