ರಾಮನಗರ : ಜಾತಿ ಗಣತಿ ಸಮಯದಲ್ಲಿ ಒಕ್ಕಲಿಗ ಸಮುದಾಯದವರು ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ ದೃಡೀಕರಿಸಿಕೊಳ್ಳಿ ಎಂದು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ನಗರಾಭಿ ವೃದ್ದಿ ಪ್ರಾಧಿಕಾರದ ಅದ್ಯಕ್ಷ ಎ.ಬಿ.ಚೇತನ್ ಕುಮಾರ್ ತಿಳಿಸಿದರು
ನಗರದ ದ್ಯಾವರಸೇಗೌಡನದೊಡ್ಡಿ ರಸ್ತೆಯ ಒಕ್ಕಲಿಗರ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಜನಾಂಗದವರಿಗೆ ಜಾತಿ ಗಣತಿ ಬಗ್ಗೆ ಸೂಕ್ತ ಮಾಹಿತಿ ಕೊಡುವುದು ನಮ್ಮ ಕರ್ತವ್ಯವಾಗಿದೆ. ಜಾತಿ ಗಣತಿ ಬಗ್ಗೆ ಕೆಲವರು ಗೊಂದಲ ಮೂಡಿಸುತ್ತಿದ್ದು, ಅದಕ್ಕೆ ಯಾರು ತಲೆ ಕೆಡಿಸಿ ಕೊಳ್ಳಬೇಡಿ. ಈ ವಿಷಯವಾಗಿ ನಮ್ಮ ಸಮುದಾಯದ ಡಾ.ನಿರ್ಮಲಾನಂದ ಸ್ವಾಮೀಜಿ ಅವರು, ಚಿಂತಕರು ಸಾಮಾಜಿಕ ಮತ್ತು ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಬಗ್ಗೆ ಹಲವು ಸಭೆಗಳನ್ನು ನಡೆಸಿ ನಮಗೆ ಮಾರ್ಗದರ್ಶನ ನೀಡಿದ್ದಾರೆ. ಅವರ ಮಾರ್ಗದರ್ಶನ ದಂತೆ ಎಚ್ಚರಿಕೆ ಯಿಂದ ಗಣತಿದಾರರಿಗೆ ಮಾಹಿತಿ ನೀಡಿ, ಸ್ಥಳದಲ್ಲಿ ನೀಡಿದ ಮಾಹಿತಿಯನ್ನು ದೃಡೀಕರಿಸಿ ಕೊಳ್ಳುವಂತೆ ಮನವಿ ಮಾಡುವುದಾಗಿ ಹೇಳಿದರು.
ನಮೂನೆಯ ಜಾತಿ ಕಲಂ ನಲ್ಲಿ ಒಕ್ಕಲಿಗ, ಉಪಜಾತಿ ಕಲಂ ನಲ್ಲಿ ಒಕ್ಕಲಿಗ ಎಂದೇ ನಮೂದಿಸಿ, ಸಮು ದಾಯದ ಕುಲ ಕಸುಬಾದ ವ್ಯವಸಾಯವನ್ನು ವೃತ್ತಿ ಕಲಂ ನಲ್ಲಿ ದಾಖಲಿಸಿ, ಧರ್ಮದ ಕಲಂನಲ್ಲಿ ಹಿಂದೂ ಎಂದು ಮಾಹಿತಿ ಕೊಡುವಂತೆ ವಿನಂತಿಸಿದರು.
ಜಿಲ್ಲಾ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಕೆ.ರಾಜು ಮಾತನಾಡಿ ರಾಜ್ಯದಲ್ಲಿ ಜಾತಿ ಗಣತಿ ಬಗ್ಗೆ ಪಕ್ಷಾತೀತವಾಗಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ, ಅಶೋಕ್, ಸುಧಾಕರ್, ಅಶ್ಚಥ್ ನಾರಾಯಣ್ ಎಲ್ಲರೂ ಚಿಂತನೆ ನಡೆಸಿ, ಸಮೀಕ್ಷೆ ವಿಷಯವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಜವಬ್ದಾರಿ ನೀಡಿದ್ದಾರೆ. ಮೀಸಲಾತಿ ವಿಷಯವಾಗಿ ಯಾವುದೇ ಗೊಂದಲ ಆಗಬಾರದು ಈ ದೃಷ್ಟಿಯಿಂದ ಒಕ್ಕಲಿಗ ಎಂದೇ ನಮೂದಿಸಿ ಎಂದು ಸಮುದಾಯದವರಲ್ಲಿ ಮನವಿ ಮಾಡಿದರು.
ಜಾತಿ ಸಮೀಕ್ಷೆ ಕೇವಲ ಒಕ್ಕಲಿಗರಿಗೆ ಅಷ್ಟೆ ಅಲ್ಲ, ಎಲ್ಲ ಸಮುದಾಯದವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುವುದಾಗಿದೆ, ಸಮೀಕ್ಷೆಗೆ ನಿಗಧಿ ಮಾಡಿರುವ ಸಮಯ ಸಾಲದಾಗಿದೆ. ಕನಿಷ್ಟ 60 ದಿನಗಳ ಸಮಯವನ್ನು ಸಮೀಕ್ಷೆಗೆ ಸಮಯ ನಿಗಧಿ ಮಾಡಿದರೆ ಗಣತಿದಾರರಿಗೆ ಸಹಾಯವಾಗಲಿದ್ದು, ಇದರಿಂದ ಸಮರ್ಪಕ ಗಣತಿ ಸಾಧ್ಯವಾಗಲಿದೆ. ಈ ಬಗ್ಗೆ ಸರ್ಕಾರ ಸಮೀಕ್ಷೆಯ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ಕೆಂಪೇಗೌಡ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಕೆ.ಚಂದ್ರಯ್ಯ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಒಕ್ಕಲಿಗರ ಸಂಘದ ಪ್ರಧಾನ
ಉಪಾಧ್ಯಕ್ಷ ಹೆಚ್.ಪಿ.ನಂಜೇಗೌಡ, ನಿರ್ದೇಶಕರಾದ ಬೈರೆಗೌಡ, ಸಿದ್ದೇಗೌಡ, ಕುಮಾರ್, ರಾಜಣ್ಣ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ಕಸಾಪ ಅಧ್ಯಕ್ಷ ದಿನೇಶ್ ಮುಖಂಡರಾದ ಜಯ ಕರ್ನಾಟಕ ರವಿ, ಷಡಕ್ಷರಿ, ಶಂಕರಾನಂದ, ರಾಜು, ಶ್ರೀಧರ್, ವಕೀಲ ರವಿ, ವಸಂತ, ಮಲ್ಲೇಶ್, ಶಿವರಾಜು ಇದ್ದರು.