ವಿಶ್ವದ ಅತ್ಯಂತ ಐಷಾರಾಮಿ ಟಿ20 ಕ್ರಿಕೆಟ್ ಲೀಗ್ (ಐಪಿಎಲ್) ನ 17ನೇ ಸೀಸನ್ನಲ್ಲಿ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಆದರೆ ಆತ ತನ್ನ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಿಕೊಳ್ಳಬೇಕೆಂದು ಆರ್ಸಿಬಿ ತಂಡದ ಮಾಜಿ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ಸಲಹೆ ನೀಡಿದ್ದಾರೆ. ಕಳೆದ 4 ಪಂದ್ಯಗಳಿಂದ 2 ಅರ್ಧಶತಕ ಸೇರಿದಂತೆ 203 ರನ್ ಗಳಿಸಿರುವ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ಮೂರರಲ್ಲಿ ಸೋಲು ಕಂಡಿರುವ ಫಾಫ್ ಡುಪ್ಲೆಸಿಸ್ ಪಡೆ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದು 9ನೇ ಸ್ಥಾನದಲ್ಲಿದೆ. ಆರಂಭಿಕ ಪಂದ್ಯದಲ್ಲೇ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಸೋಲಿನೊಂದಿಗೆ ಪಯಣ ಆರಂಭಿಸಿದ ಆರ್ ಸಿಬಿ ತಂಡ, ತವರಿನ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿತ್ತು.
ಆದರೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆದ ಕೆಕೆಆರ್ ಹಾಗೂ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯಗಳಲ್ಲಿ ಸೋಲು ಕಂಡಿದೆ. ತಮ್ಮದೇ ಆದ ಅಧಿಕೃತ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಮಿಸ್ಟರ್ 360 ಬ್ಯಾಟರ್ ಎಬಿಡಿ ವಿಲಿಯರ್ಸ್, ಕಳೆದ ಆವೃತ್ತಿಗಿಂತ ವಿರಾಟ್ ಕೊಹ್ಲಿ ಪವರ್ ಪ್ಲೇ ನಲ್ಲಿ ಹೆಚ್ಚು ಆಕ್ರಮಣಕಾರಿ ಆಟ ಆಡುತ್ತಿದ್ದಾರೆ. ಅದರ ಬದಲಿಗೆ ಫಾಫ್ ಡುಪ್ಲೆಸಿಸ್ ಆಕ್ರಮಣಕಾರಿ ಯಾಗಿ ಆಡಿ ವಿರಾಟ್ ಕೊಹ್ಲಿ ಮಧ್ಯಮ ಓವರ್ ಗಳವರೆಗೂ ತಮ್ಮ ಬ್ಯಾಟಿಂಗ್ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.