ಕೆ.ಆರ್.ಪೇಟೆ: ರೇವತಿ ನಕ್ಷತ್ರದ ವಿಶೇಷ ಪೂಜಾ ಸಮಾರಂಭಕ್ಕೆ ಕಲ್ಲಹಳ್ಳಿಯ ಭೂವರಹನಾಥ ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ. ವಿವಿಧ ಅಭಿಷೇಕಗಳು ಹಾಗೂ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಂಭ್ರಮವನ್ನು ಭಕ್ತಾದಿಗಳು ಕಣ್ತುಂಭಿಕೊಂಡರು.
ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂ ವೈಕುಂಠವೆಂದೇ ಪ್ರಖ್ಯಾತವಾಗಿರುವ ವರಹನಾಥ ಕಲ್ಲಹಳ್ಳಿಯಲ್ಲಿ ರೇವತಿ ನಕ್ಷತ್ರದ ಅಂಗವಾಗಿ ಭೂದೇವಿ ಸಮೇತ ಶ್ರೀಲಕ್ಷ್ಮಿ ಭೂವರಹನಾಥ ಸ್ವಾಮಿಗೆ ಅಭಿಷೇಕ ಪುಷ್ಪಾಭಿಷೇಕ ಹಾಗೂ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆದವು.
1000 ಲೀಟರ್ ಹಾಲು 500 ಲೀಟರ್ ಎಳನೀರು, ಕಬ್ಬಿನ ಹಾಲು, ಜೇನುತುಪ್ಪ, ಹಸುವಿನತುಪ್ಪ, ಮೊಸರು, ಸುಗಂಧ ದ್ರವ್ಯಗಳು ಅರಿಶಿಣ ಶ್ರೀಗಂಧ ಸೇರಿದಂತೆ ಪವಿತ್ರ ಗಂಗಾಜಲದಿಂದ ಅಭಿಷೇಕ ಮಾಡಿ ಮಲ್ಲಿಗೆ, ಜಾಜಿ, ಸಂಪಿಗೆ, ಸೇವಂತಿಗೆ, ಗುಲಾಬಿ, ಸ್ಪಟಿಕ, ಕನಕಾಂಬರ, ಜವನ, ಪವಿತ್ರಪತ್ರೆಗಳು ಸೇರಿದಂತೆ 58 ಬಗೆಯ ವಿವಿಧ ಪುಷ್ಪಗಳಿಂದ ಪುಷ್ಪಾಭಿಷೇಕ ಮಾಡಿ ಪಟ್ಟಾಭಿಷೇಕ ಕಾರ್ಯಕ್ರಮ ನಡೆಸಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದ ಮೂಲಕ ಸ್ವಾಮಿಯನ್ನು ವಿಶೇಷವಾಗಿ ಪೂಜಿಸಲಾಯಿತು..
ಭೂವರಹನಾಥ ಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿಯ ವ್ಯವಸ್ಥಾಪನ ನಿರ್ದೇಶಕರಾದ ಶ್ರೀನಿವಾಸ ರಾಘವನ್ ಅವರು ಮಾತನಾಡಿದರು.ಶಾಸಕಿ ಮಂಜುಳಾ ಲಿಂಬಾವಳಿ, ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಡಾ. ಕೃಷ್ಣಪ್ಪ, ಚಲನಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಸಿ. ಅಶೋಕ್, ಕೋಲಾರದ ಸಮಾಜಸೇವಕ ರವೀಂದ್ರ, ಬೆಡದಹಳ್ಳಿ ಶ್ರೀ ಪಂಚಭೂತೇಶ್ವರ ಸುಕ್ಷೇತ್ರದ ಪೋಠಾಧ್ಯಕ್ಷರಾದ ಶ್ರೀ ರುದ್ರಮುನಿ ಸ್ವಾಮೀಜಿ, ಗಂಜಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ ಆರ್ ಪರಮೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಮತಾ ಶೆಟ್ಟಿ ಸೇರಿದಂತೆ ಸಾವಿರಾರು ಭಕ್ತಾದಿಗಳು ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೇವತಿ ನಕ್ಷತ್ರದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಸಿಹಿ ಪೋಗಲ್ ಮೊಸರನ್ನ ಹಾಗೂ ಬಿಸಿಬೇಳೆ ಬಾತ್ ಪ್ರಸಾದವನ್ನು ವಿತರಿಸಲಾಯಿತು. ವೇದಬ್ರಹ್ಮ ಶ್ರೀನಿವಾಸ ಅಯ್ಯಂಗಾರ್, ವಿಜಯ ನಾರಸಿಂಹನ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆದವು.