ಮಂಗಳೂರು: ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ವ್ಯಕ್ತಿಯೋರ್ವ ಆಸಿಡ್ ದಾಳಿ ನಡೆಸಿದ್ದು, ಆತನನ್ನು ತಕ್ಷಣವೇ ಪೊಲೀಸರು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.
ಕಡಬದ ಸರ್ಕಾರಿ ಕಾಲೇಜಿನ ಆವರಣದಲ್ಲಿ ನಿಂತಿದ್ದ ಮೂವರು ಪಿಯುಸಿ ವಿದ್ಯಾರ್ಥಿನಿಯರ ಮೇಲೆ ಕೇರಳ ಮೂಲದ ವಿದ್ಯಾರ್ಥಿ ಎನ್ನಲಾದವನು ಆಸಿಡ್ ದಾಳಿ ನಡೆಸಿದ್ದಾನೆ. ಆಸಿಡ್ ದಾಳಿಯಿಂದಾಗಿ ಗಾಯಗೊಂಡ ವಿದ್ಯಾರ್ಥಿನಿಯರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಗಾಯಗೊಂಡಿರುವ ಮೂವರ ಪೈಕಿ ಓರ್ವ ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿದ್ದು,
ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಆಸಿಡ್ ದಾಳಿ ನಡೆಸಿದ ಅಬಿನ್ ಎಂಬಾತ ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಟೋಪಿ ಹಾಕಿಕೊಂಡು ಬಂದಿದ್ದ ಎನ್ನಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಜಿಲ್ಲಾ ಎಸ್ಪಿ ಸಿಬಿ ರಿಷ್ಯಂತ್, ಆಸಿಡ್ ದಾಳಿಗೊಳಗಾದ ವಿದ್ಯಾರ್ಥಿನಿಗೆ ಆರೋಪಿ ಪರಿಚಯವಿದ್ದ ಎಂದು ಹೇಳಿದ್ದು, ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಘಟನೆ ನಡೆದ ಒಂದುಗಂಟೆಯೊಳಗಾಗಿ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.