ಹುಬ್ಬಳ್ಳಿ: ಕಳೆದ ಮೂರು ದಿನಗಳ ಹಿಂದೆ ಬೆಳಗಿನ ಜಾವ ವೀರಾಪುರ ಓಣಿಯ ಅಮಾಯಕ ಅಂಜಲಿ ಅಂಬಿಗೇರ ಮನೆಗೆ ನುಗ್ಗಿ ಏಕಾಏಕಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಕೊಲೆಗಾರ ವಿಶ್ವನಾಥ ಅಲಿಯಾಸ್ ಗಿರೀಶ ಸಿಕ್ಕಿಬಿದ್ದಿದ್ದಾನೆ.
ವಿಶ್ವನಾಥನ್ನನ್ನ ಬಂಧಿಸಲು ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ಕಳೆದ ಎರಡು ಮೂರು ದಿನಗಳಿಂದ ಪೊಲೀಸರು ಹಗಲು ಇರುಳು ಸಿ ಸಿ ಕ್ಯಾಮೆರಾ ನೋಡುವ ಜೊತೆಗೆ ಎಲ್ಲ ಕಡೆಗೂ ಈ ಕುರಿತು ಮಾಹಿತಿ ನೀಡಿದ್ದರು.ನಿನ್ನೆ ರಾತ್ರಿ ವಿಶ್ವಮಾನವ ರೈಲಿನಲ್ಲಿ ಆರೋಪಿ ಗಿರೀಶ್ ಪ್ರಯಾಣಿಸುತ್ತಿದ್ದು, ರೈಲಿನಲ್ಲಿದ್ದ ತುಮಕೂರು ಮೂಲದ ಮಹಿಳೆಯೊಂದಿಗೆ ಕಿರಿಕ್ ಮಾಡಿಕೊಂಡಿದ್ದ ಎನ್ನಲಾಗಿದೆ.
ಈ ಸಂದರ್ಭದಲ್ಲಿ ರೈಲಿನಿಂದ ಪ್ರಯಾಣಿಕರು ಆತನನ್ನು ಥಳಿಸಿದ್ದಾರೆ. ದಾವಣಗೆರೆ ತಾಲೂಕು ಮಾಯಕೊಂಡ ರೈಲು ನಿಲ್ದಾಣದಲ್ಲಿ ರೈಲಿನಿಂದ ಜಿಗಿದು ಗಿರೀಶ್ ಪರಾರಿಯಾಗಲು ಯತ್ನಿಸಿದ್ದಾರೆ. ಅನುಮಾನಗೊಂಡ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ರೈಲ್ವೇ ಪೊಲೀಸರು ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ರವಾನೆ ಮಾಡಿ ಅವರ ವಶಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೈಲು ಪ್ರಯಾಣಿಕರ ಥಳಿತದಿಂದ ಗಂಭೀರವಾಗಿ ಗಾಯಗೊಂಡಿರುವ ಆರೋಪಿ ಗಿರೀಶ್ ಯಾವುದೇ ಹೇಳಿಕೆ ನೀಡುವ ಸ್ಥತಿಯಲ್ಲಿ ಇಲ್ಲ ಎಂದು ಪೊಲೀಸ್ ಆಯುಕ್ತ ರೇಣುಕ ತಿಳಿಸಿದ್ದಾರೆ.ಕೊಲೆ ಮಾಡಿದ ದಿನ ಹಾವೇರಿಗೆ ಬಂದಿದ್ದ ಗಿರೀಶ್ ಅಲ್ಲಿಂದ ಮೈಸೂರಿಗೆ ಹೋಗಿ ಮಹಾರಾಜ ಹೋಟೆಲ್ನಲ್ಲಿ ತಂಗಿದ್ದ ಎಂದು ತಿಳಿದುಬಂದಿದ್ದು,ನಿನ್ನೆ ಮೈಸೂರಿನಿಂದ ಹುಬ್ಬಳ್ಳಿಗೆ ಬರುವ ವೇಳೆ ಸಿಕ್ಕಿಬಿದ್ದಿದ್ದಾನೆ.