ಕೋಪನ್ ಹೇಗ್: ಡೆನ್ಮಾರ್ಕ್ ಪ್ರಧಾನಿ ಮ್ಯಾಟೆ ಫ್ರೆಡೆರಿಕ್ಸನ್ ಅವರ ಮೇಲೆ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ(ಜೂನ್ 07) ನಡೆದಿದ್ದು, ಮ್ಯಾಟೆ ಅವರು ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ ಎಂದು ರಾಯಟರ್ಸ್ ವರದಿ ತಿಳಿಸಿದೆ.
ಸೆಂಟ್ರಲ್ ಕೋಪನ್ ಹೇಗ್ ನಲ್ಲಿ ಪ್ರಧಾನಿ ಮ್ಯಾಟೆ ಫ್ರೆಡೆರಿಕ್ಸನ್ ಅವರ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿಯನ್ನು ಬಂಧಿಸಲಾಗಿದೆ. ಘಟನೆಯಿಂದ ಪ್ರಧಾನಿ ಮ್ಯಾಟೆ ಆಘಾತಕ್ಕೊಳಗಾಗಿರುವುದಾಗಿ ಪ್ರಧಾನಿ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ದಾಳಿ ನಡೆಸಿದ ಆರೋಪಿಯನ್ನು ಬಂಧಿಸಿದ್ದು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದು,
ಬಂಧಿತನ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವುದಾಗಿ ವರದಿ ವಿವರಿಸಿದೆ. ಪ್ರಧಾನಿಯವರ ಮೇಲೆ ಹಲ್ಲೆ ನಡೆಯುತ್ತಿದ್ದಂತೆಯೇ ಭದ್ರತಾ ಸಿಬಂದಿಗಳು ಅವರನ್ನು ಎಸ್ಕಾರ್ಟ್ ನಲ್ಲಿ ಕರೆದೊಯ್ದಿದ್ದರು. ಯುರೋಪಿಯನ್ ಚುನಾವಣೆಗೆ ಎರಡು ದಿನ ಇರುವಾಗಲೇ ಈ ಘಟನೆ ನಡೆದಿದೆ. ಮೂರು ವಾರಗಳ ಹಿಂದಷ್ಟೇ ಸ್ಲೋವಕಿಯಾ ಪ್ರಧಾನಮಂತ್ರಿ ರೋಬರ್ಟ್ ಫಿಕೋ ಅವರ ಮೇಲೆ ಮಾರಣಾಂತಿಕ ದಾಳಿ ನಡೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ ಎಂದು ವರದಿ ತಿಳಿಸಿದೆ.