ಬೆಂಗಳೂರು: ಮನೆ ಬಳಿ ಬಂದ ಅಪರಿಚಿತರನ್ನು ಕಂಡು ನಾಯಿ ಬೊಗಳಿದ್ದಕ್ಕೆ ಆಕ್ರೋಶಗೊಂಡು, ಅದನ್ನು ಸಾಕಿದ್ದವರ ಮೇಲೆ ಹಲ್ಲೆ ಮಾಡಿದ್ದ ಪಕ್ಕದ ಮನೆಯಾತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಪಟ್ಟೇಗಾರಪಾಳ್ಯದ ಮುನೇಶ್ವರ ನಗರದಲ್ಲಿ ವಾಸವಾಗಿದ್ದ 20 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಪಕ್ಕದ ಮನೆ ನಿವಾಸಿ ಶಂಕರ್ ಎಂಬಾತನನ್ನು ಬಂಧಿಸಲಾಗಿದೆ.ಯುವತಿ ತಂದೆ-ತಾಯಿಯೊಂದಿಗೆ ವಾಸ ಮಾಡುತ್ತಿದ್ದಳು. ಈಕೆಯ ಪಕ್ಕದ ಮನೆಯಲ್ಲಿ ಆರೋಪಿ ಶಂಕರ್ ವಾಸವಾಗಿದ್ದ. ಮೊನ್ನೆ ಮಾರ್ಚ್ 7ರ ರಾತ್ರಿ ಶಂಕರ್ ಹಾಗೂ ಆತನ ಸಹಚರರು ಮನೆಗೆ ಬರುವಾಗ ಅಪರಿಚಿತರನ್ನು ಕಂಡ ಸಾಕುನಾಯಿ ಬೊಗಳಿದೆ.
ಪರಿಣಾಮ ಶಂಕರ್ ಹಾಗೂ ಆತನ ಸಹಚರರು ನಾಯಿ ಮೇಲೆ ದಾಳಿ ಮಾಡಿದ್ದಾರೆ. ಇದನ್ನು ಕಂಡು ಪ್ರಶ್ನಿಸಿದ ಯುವತಿ ಕುಟುಂಬಸ್ಥ ರೊಂದಿಗೂ ಶಂಕರ್ ಗ್ಯಾಂಗ್ ಮಾತಿನ ಚಕಮಕಿಗಿಳಿದಿದೆ. ಕ್ಷಣಾರ್ಧದಲ್ಲೆ ಕಬ್ಬಿಣದ ರಾಡ್ನಿಂದ ಯುವತಿಯ ತಂದೆ ತಲೆಗೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಾರೆ. ಅಲ್ಲದೆ, ತಡೆಯಲು ಬಂದ ಯುವತಿಯನ್ನು ಆತನ ಸಹಚರರರು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಯುವತಿ ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿ ಮಾಹಿತಿ ನೀಡಿ ಪೊಲೀಸರ ನೆರವಿನಿಂದ ತಂದೆಯನ್ನು ಸ್ಥಳೀಯ ಆಸ್ಪತ್ರೆಗೂ ಸೇರಿಸಿದ್ದಾಳೆ. ಆಗಿರುವ ಘಟನೆ ಸಂಬಂಧ ಯುವತಿ ಅಳುತ್ತಲೇ ಮಹಿಳಾ ಆಯೋಗ ಅಧ್ಯಕ್ಷೆಗೂ ವಾಯ್ಸ್ ಮೆಸೇಜ್ ಮಾಡಿದ್ದಳು. ಘಟನೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಶಂಕರ್ನನ್ನು ಬಂಧಿಸಿದ್ದಾರೆ.