ಬೆಂಗಳೂರು: ವಿಡಿಯೋದಲ್ಲಿ ಕಂತೆ ಕಂತೆ ಹಣ ತೋರಿಸಿ ವಂಚಿಸುತ್ತಿದ್ದ ಖತರ್ನಾಕ್ ಖದೀಮನನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ. ವಂಚಕ ಕಿಶನ್ ಅಲಿಯಾಸ್ ಮಾಕಳಿ ಕಿಶನ್ ಬಂಧಿತ ಆರೋಪಿಯಾಗಿದ್ದು, ಆರೋಪಿಯು ಟ್ರೇಡಿಂಗ್ ಹೆಸರಿನಲ್ಲಿ ಅಮಾಯಕರಿಗೆ ಬಲೆ ಬೀಸಿ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾನೆ.
ವಂಚಕ ಕಿಶನ್ ಕಂತೆ ಕಂತೆ ಹಣದ ವಿಡಿಯೋ ಕಳಿಸಿ ನೀವು ಮಾಡಿದ ಹೂಡಿಕೆ ಹಣಕ್ಕೆ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಜನರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ.
ಬಳಿಕ ಅವರಿಂದ ಲಕ್ಷ ಲಕ್ಷ ಹಣ ಪಡೆದು ಮೋಸ ಮಾಡುತ್ತಿದ್ದ. ಸದ್ಯ ಗುಣನಿಧಿ ಎಂಬುವರ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 15.15 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದಾನೆ ಎಂದು ಗುಣನಿಧಿಯವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.