ರಾಮನಗರ: ನಗರ ವ್ಯಾಪ್ತಿಯ ಕಡು ಬಡವರಿಗೆ ಸೂರು ಕಲ್ಪಿಸಲು 5 ಸಾವಿರ ನಿವೇಶನಗಳನ್ನು ನೀಡಲು ಕ್ರಮ ವಹಿಸಲಾಗಿದೆ ಎಂದು ಶಾಸಕ ಎಚ್.ಎ.ಎಕ್ಬಾಲ್ಹುಸೇನ್ ತಿಳಿಸಿದರು.ತಾಲ್ಲೂಕಿನ ಕೈಲಂಚಾ ಹೋಬಳಿಯ ವಿಭೂತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮೇಗೌಡನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ 35 ವರ್ಷಗಳಿಂದ ಸೂರಿಲ್ಲದೆ ಬಾಡಿಗೆ ಮನೆಗಳಲ್ಲಿ ಕಷ್ಟದಿಂದ ಹಲವು ಬಡವರು ವಾಸ ಮಾಡುತ್ತಿದ್ದಾರೆ. ಅಂತವರ ನೆರವಿಗೆ ನಿಂತು ಸೂರು ಕಲ್ಪಿಸಲು ನಗರದ ಸುತ್ತಮುತ್ತ 50 ಎಕರೆ ಸರ್ಕಾರಿ ಗೋಮಾಳ ಭೂಮಿಯನ್ನು ಗುರ್ತಿಸುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರ ಸೂಚನೆಯಂತೆ ಸುಮಾರು 47 ಕೋಟಿ ರೂ ವೆಚ್ಚದಲ್ಲಿ ಖಾಸಗಿಯವರಿಂದ 50 ಎಕರೆ ಜಮೀನನ್ನು ಖರೀದಿಸುವ ಕೆಲಸ ನಡೆಯುತ್ತಿದ್ದು,
ಒಟ್ಟಾರೆ 100 ಎಕರೆ ಪ್ರದೇಶದಲ್ಲಿ ನಿವೇಶನ ಹಂಚುವ ಮೂಲಕ ಮೂರು ತಿಂಗಳಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ಈ ಹಿಂದೆ ಸರ್ಕಾರದಿಂದ ಮಂಜೂರಾಗಿದ್ದ 888 ಪಲಾನುಭವಿಗಳಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡಲು ಪ್ರಥಮ ಆದ್ಯತೆ ನೀಡಲಾಗುವುದು.
ಸುಮಾರು 3 ರಿಂದ 5 ಸಾವಿರ ಪಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಪ್ರತಿ ಪಲಾನುಭವಿ ತಲಾ ಒಂದು ಲಕ್ಷ ರೂಗಳನ್ನು ಸರ್ಕಾರಕ್ಕೆ ಡಿಡಿ ರೂಪದಲ್ಲಿ ನೀಡಬೇಕಾಗಿದೆ. ಈಗಾಗಲೇ ಅರ್ಹ ಪಲಾನುಭವಿಗಳಿಗೆ ಅರ್ಜಿ ನಮೂನೆ ವಿತರಿಸಲಾಗುತ್ತಿದೆ. ಇಲ್ಲಿ ಮಧ್ಯವರ್ತಿ ಗಳಿಗೆ ಯಾವುದೇ ಆಸ್ಪದವಿಲ್ಲ.
ಆಯಾಯ ವಾರ್ಡ್ ಸಮಿತಿ ರಚಿಸಲಾಗುವುದು. ಅವರ ಮೂಲಕ ಅರ್ಹ ಪಲಾನುಭವಿಯನ್ನು ಗುರ್ತಿಸುವ ಕೆಲಸ ಅವರ ನೆರವಿನಲ್ಲಿ ಗುರ್ತಿಸಲಾಗುವುದು. ಯಾವುದೇ ಪಲಾನುಭವಿಯ ಬಳಿ ಹಣ ಯಾರಾದರೂ ಕೇಳಿದರೆ ಅಂತವರ ಬಗ್ಗೆ ನನ್ನ ಗಮನಕ್ಕೆ ತರುವಂತೆ ಹೇಳಿದರು.
ಬಡವರ ಸಮಸ್ಯೆಯ ಬಗ್ಗೆ ವಸತಿ ಸಚಿವರು ಸ್ಪಂದಿಸಿದ್ದು ರಾಮನಗರ ಕ್ಷೇತ್ರಕ್ಕೆ 3 ಸಾವಿರ ಮನೆಗಳನ್ನು ಮಂಜೂರು ಮಾಡಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 147 ಮನೆಗಳಂತೆ ಹಂಚಿಕೆ ಮಾಡಲಾಗಿದೆ. ಎಲ್ಲ ವರ್ಗದವರಿಗೆ ಮನೆಗಳನ್ನು ಹಂಚಿಕೆ ಮಾಡಲು ಆಯಾಯ ಗ್ರಾಮ ಪಂಚಾಯಿತಿಗಳ ಪಿಡಿಓಗಳು ನಿಯಮಾನುಸಾರ ಹಂಚಿಕೆ ಮಾಡಲು ಕ್ರಮ ವಹಿಸಲಿದ್ದಾರೆ.
ಕಸಬಾ ಮತ್ತು ಕೈಲಂಚಾ ಹೋಬಳಿಗಳಲ್ಲಿ 30 ಕೋಟಿ ರೂಗಳ ವೆಚ್ಚದಲ್ಲಿ ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗುತ್ತಿದ್ದು, ವಿವಿಧ ಇಲಾಖೆಗಳ ಮೂಲಕ ಅತ್ಯಗತ್ಯವಾಗಿ ಆಗಬೇಕಿರುವ ಮೂಲಭೂತ ಅಭಿವೃದ್ದಿ ಕೆಲಸಗಳು ಅನುಷ್ಟಾನಗೊಳ್ಳುತ್ತಿವೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿದ್ದ ಒಂದು ವರ್ಷದ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ರಾಮನಗರದಲ್ಲಿ ನಡೆದ ಸಂಧರ್ಭದಲ್ಲಿ ಸಿಎಂ ಅವರಿಗೆ ವಿಶೇಷ ಅನುದಾನಕ್ಕೆ ಮನವಿ ಮಾಡಲಾಗಿತ್ತು. ಅದರಂತೆ ಕೊಟ್ಟ ಮಾತಿನಂತೆ ನಗರದ ಅಭಿವೃದ್ದಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 82 ಕೋಟಿ ರೂಗಳನ್ನು ನೀಡಿದ್ದು, ಡಿಪಿಅರ್ ಮಾಡಲಾಗುತ್ತಿದೆ. ಅರ್ಕಾವತಿ ನದಿಯ ಎರಡು ಕಡೆಗಳ 3.75 ಕಿ.ಮೀ ದೂರದ ವಾಕಿಂಗ್ ಪಾಥ್ ನಿರ್ಮಾಣ ಕಾರ್ಯಕ್ಕೆ ಡಿ.ಕೆ.ಶಿವಕುಮಾರ್ ಅವರು ಸುಮಾರು 156 ಕೋಟಿ ರೂ ಅನುದಾನ ನೀಡಿದ್ದಾರೆ.
87 ಕೋಟಿ ನಗರಾಭಿವೃದ್ದಿ ಇಲಾಖೆ ವತಿಯಿಂದ ಅನುದಾನ ಸಿಕ್ಕಿದೆ, ಒಟ್ಟಾರೆ ಸಮಗ್ರ ಮೂಲಭೂತ ಸೌಕರ್ಯಕ್ಕೆ ಇನ್ನೂ 500 ಕೋಟಿ ರೂ ಅನುದಾನ ಸಿಕ್ಕರೆ ನಗರದ ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ನೆರವಾಗಲಿದೆ ಎಂದು ಹೇಳಿದರು.
ಈ ವೇಳೆ ಮಾಜಿ ಶಾಸಕ ಕೆ.ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವಿ.ಹೆಚ್.ರಾಜು, ಎ.ಬಿ.ಚೇತನ್ಕುಮಾರ್, ಮಾಜಿ ಅಧ್ಯಕ್ಷ ಜಯರಾಮಯ್ಯ, ಯುವ ಘಟಕದ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಕಾರ್ಯಾಧ್ಯಕ್ಷ ಅನಿಲ್ ಜೋಗಿಂದರ್, ವಿಭೂತಿಕೆರೆ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಂತ್ ಗುತ್ತಿಗೆದಾರ ವಾಸು, ಮುಖಂಡರಾದ ಶ್ರೀನಿವಾಸ್, ರಘು, ಚಂದ್ರಗಿರಿ ಮತ್ತಿತರರು ಇದ್ದರು.