ಬೆಂಗಳೂರು: ಆಡಳಿತ ಹಾಗೂ ರಾಜ್ಯದ ಬಗ್ಗೆ ಕೆ.ಸಿ ರೆಡ್ಡಿ ಅವರಿಗಿದ್ದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಯ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೆ.ಸಿ.ರೆಡ್ಡಿಯವರ 48 ನೇ ಪುಣ್ಯ ತಿಥಿಯನ್ನು ಇಂದು ಆಚರಿಸಲಾಗಿದೆ. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳು. ರಾಜ್ಯದ ಬೆಳವಣಿಗೆಗೆ ಅಡಿಪಾಯ ಹಾಕಿದವರು ಅವರು. ಸ್ವಾತಂತ್ರ್ಯ ಹೋರಾಟಗಾರರಾಗಿ ತಮ್ಮನ್ನು ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಕರ್ನಾಟಕ ಇಂದು ಆರ್ಥಿಕವಾಗಿ ಸಧೃಢವಾಗಿದ್ದರೆ ಅವರು ಹಾಕಿದ ಬುನಾದಿಯೇ ಕಾರಣ. 1950 ನೇ ಇಸವಿಯಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಮೊದಲ ಚುನಾವಣೆಯಲ್ಲಿ ಕೆ.ಸಿ.ರೆಡ್ಡಿಯವರೇ ಮೊದಲ ಮುಖ್ಯ ಮಂತ್ರಿಯಾದರು. ಅವರನ್ನು ಸ್ಮರಿಸಿ ಗೌರವಿಸುವ ಕೆಲಸವನ್ನು ಸರ್ಕಾರ ಮಾಡಿದೆ ಎಂದರು.