ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಖಡಕ್ ವಿಲನ್ ಅಂತ ಗುರುತಿಸಿಕೊಂಡಿದ್ದ ನಟ ಡ್ಯಾನಿಯಲ್ ಬಾಲಾಜಿ. ಬಹುಭಾಷಾ ನಟನಾಗಿ ದಕ್ಷಿಣ ಭಾರತದಲ್ಲಿ ಪ್ರೀತಿ ಗಳಿಸಿದ್ದ ಡ್ಯಾನಿಯಲ್ ಬಾಲಾಜಿ ನಿನ್ನೆ(ಮಾರ್ಚ್ 29) ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನಟನ ದಿಢೀರ್ ಅಗಲಿಕೆಯ ಶಾಕ್ನಿಂದ ಸಿನಿಪ್ರಿಯರು ಇನ್ನೂ ಹೊರಬಂದಿಲ್ಲ. ಡ್ಯಾನಿಯಲ್ ಬಾಲಾಜಿ ತಮಿಳು ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿದ್ದರೂ, ಕನ್ನಡಿಗರಿಗೂ ಚಿರಪರಿಚಿತ. ‘ಕಿರಾತಕ’ ಸಿನಿಮಾ ಕನ್ನಡಕ್ಕೂ ಕಾಲಿಟ್ಟಿದ್ದ ಡ್ಯಾನಿಯಲ್ ಬಾಲಾಜಿ ದುನಿಯಾ ವಿಜಯ್ ನಟಿಸಿದ ‘ಶಿವಾಜಿನಗರ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು.
ಕನ್ನಡಿಗರು ಇಂದಿಗೂ ‘ಕಿರಾತಕ’ ಸಿನಿಮಾದ ಪಾತ್ರದಿಂದಲೇ ನೆನಪಿಟ್ಟುಕೊಂಡಿದ್ದಾರೆ. ಡ್ಯಾನಿಯಲ್ ಬಾಲಾಜಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಮ್ಮ ಕಣ್ಣುಗಳನ್ನು ದಾನ ಮಾಡಿದ್ದ ಬಾಲಾಜಿ ಅವರ ಸಾವಿನ ಬಳಿಕ ಕತ್ತಲೆಯಲ್ಲಿದವರ ಬಾಳನ್ನು ಬೆಳಕಾಗಿಸಿದ್ದಾರೆ. ಸಾವಿನ ಸುದ್ದಿ ಕೇಳಿ ಆತಂಕದಲ್ಲಿದ್ದ ಅಭಿಮಾನಿಗಳು ಡ್ಯಾನಿಯಲ್ ಬಾಲಾಜಿ ಬಗೆಗಿನ ಈ ವಿಷಯ ಕೇಳಿ ಮತ್ತಷ್ಟು ಭಾವುಕರಾಗಿದ್ದಾರೆ.
ಹೃದಯಾಘಾತದಿಂದ ಮೃತ ಪಟ್ಟ ಡ್ಯಾನಿಯಲ್ ಬಾಲಾಜಿ ತೆರೆಮೇಲಷ್ಟೇ ವಿಲನ್ ಅನ್ನೋದನ್ನು ಸಾಬೀತು ಮಾಡಿ ಹೋಗಿದ್ದಾರೆ. ಸಾವಿನಲ್ಲೂ ಕೆಲವರ ಬಾಳಲ್ಲಿ ಬೆಳಕು ತಂದಿದ್ದಾರೆ. ಈ ವಿಷಯ ಅಭಿಮಾನಿಗಳಿಗೆ ತಿಳಿಯುತ್ತಿದ್ದಂತೆ ಮತ್ತಷ್ಟು ಭಾವುಕರಾಗಿದ್ದಾರೆ. ನಟನ ಒಳ್ಳೆಯ ಗುಣಕ್ಕೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡ್ಯಾನಿಯಲ್ ಬಾಲಾಜಿ ತಮಿಳಿನ ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಗೌತಮ್ ವಾಸುದೇವ್ ಮೆನನ್, ವೆಟ್ರಿಮಾರನ್ ಅಂತ ದಿಗ್ಗಜರ ಸಿನಿಮಾಗಳಲ್ಲಿ ನಟಿಸಿದ್ದರು. ಡ್ಯಾನಿಯಲ್ ಬಾಲಾಜಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಂತಮ ದರ್ಶನ ಪಡೆದಿದ್ದಾರೆ. ದಿಢೀರನೇ ಅಗಲಿಗೆ ನಟನ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಡ್ಯಾನಿಯಲ್ ಬಾಲಾಜಿಯ ಅಂತ್ಯಕ್ರಿಯೆ ಇಂದು (ಮಾರ್ಚ್ 30)ರಂದು ತಿರುವನ್ಮಿಯೂರಿನ ಅವರ ನಿವಾಸದಲ್ಲಿ ನಡೆಯಲಿದೆ ಎಂದು ಸಂಬಂಧಿಗಳು ತಿಳಿಸಿದ್ದಾರೆ.