ನೆಲಮಂಗಲ: “ಸಿಂಗಾನಲ್ಲೂರಿನಿಂದ ಹುಟ್ಟಿ ಬಂದ ಮುತ್ತುರಾಜ್, ಮುಂದೆ ರಾಜ್ ಕುಮಾರ್ ಆಗಿ ಮುಗಿಲೆತ್ತರಕ್ಕೇರಿದ್ದು ಅತ್ಯಂತ ಸೋಜಿಗವಾದದ್ದು. ಅವರ ಚಿತ್ರಗಳು ನಮಗೆಲ್ಲ ಜೀವನಮೌಲ್ಯವನ್ನು ಕಲಿಸುವ ಪಠ್ಯವಿದ್ದಂತೆ. ನಾವುಗಳು ಶಾಲೆಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚು ಮೌಲ್ಯಗಳನ್ನು ರಾಜಕುಮಾರ್ ಚಿತ್ರಗಳಿಂದ ಕಲಿತಿದ್ದೇವೆ.
ಅವರ ನಡೆ ಮತ್ತು ನುಡಿಯ ನಡುವೆ ಸಾಮ್ಯವಿತ್ತು. ಅವರ ಸರಳತೆ ನಮ್ಮೆಲ್ಲರಿಗೂ ಮಾರ್ಗದರ್ಶಕ” ಎಂದು ಲೇಖಕ ಚಿಂತಕ ಅಂಕಣಕಾರ ಮಣ್ಣೆ ಮೋಹನ್ ತಿಳಿಸಿದ್ದಾರೆ.ತಾಲ್ಲೂಕಿನ ರಂಗ ಶಿಕ್ಷಣ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ಡಾ ರಾಜಕುಮಾರ್ ಜನ್ಮದಿನದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
“ಡಾ. ರಾಜಕುಮಾರ್ ತಾವು ಮಾತ್ರ ಬೆಳೆಯದೆ, ತಮ್ಮ ಜೊತೆಗೆ ಅಭಿನಯಿಸುತ್ತಿದ್ದ ಇತರೆ ಪೋಷಕ ನಟರು ಮತ್ತು ಹಾಸ್ಯ ನಟರುಗಳನ್ನು ಕೂಡ ಬೆಳೆಸಿದ್ದು ಅವರ ವಿಶೇಷ ಗುಣವಾಗಿತ್ತು. ಸಾಧಿಸಲು ವಿದ್ಯೆಯೇ ಬೇಕಿಲ್ಲ ಎಂಬುದನ್ನು ಅವರು ನಿರೂಪಿಸಿದರು” ಎಂದು ಪ್ರಾಧ್ಯಾಪಕ, ಚಿಂತಕ ಮತ್ತು ತಾಲೂಕು ಕಲಾವಿದರ ಬಳಗದ ಅಧ್ಯಕ್ಷ ಗಂಗರಾಜು ತಿಳಿಸಿದರು.
ತಾಲ್ಲೂಕು ಕಸಾಪ ಅಧ್ಯಕ್ಷರಾದ ಬಿ ಪ್ರಕಾಶ್ ಮೂರ್ತಿ ಮಾತನಾಡಿ “ಸಾಕ್ಷಾತ್ ಕಲಾದೇವತೆಯೇ ಅವರಿಗೆ ಜನ್ಮ ನೀಡಿ ಈ ನಾಡಿನಲ್ಲಿ ಹುಟ್ಟಿಸಿದ್ದಳು, ಅವರ ನಾಲಿಗೆಯಲ್ಲಿ ಸಾಕ್ಷಾತ್ ಸರಸ್ವತಿಯೇ ನೆಲೆಸಿದ್ದಳು” ಎಂದು ಗುಣಗಾನ ಮಾಡಿದರು. ನಿಕಟಪೂರ್ವ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಮಾತನಾಡಿ, “ರಾಜಕುಮಾರ್ ಅವರ ಸಿನಿಮಾಗಳಲ್ಲಿ ಮದ್ಯಪಾನ, ಧೂಮಪಾನದ ದೃಶ್ಯಗಳೇ ಇರುತ್ತಿರಲಿಲ್ಲ. ಹಾಗೆಯೇ ಅವರು ಎಷ್ಟೇ ಒತ್ತಡವಿದ್ದರೂ ರಾಜಕೀಯಕ್ಕೆ ಸೇರಲಿಲ್ಲ” ಎಂದು ಅವರ ವಿಶೇಷತೆಯನ್ನು ಗುರುತಿಸಿದರು.
ರಂಗಶಿಕ್ಷಣ ಕೇಂದ್ರ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಸಿದ್ದರಾಜು ಮಾತನಾಡಿ ಡಾ. ರಾಜಕುಮಾರ್ ಇಡೀ ನಾಡಿಗೆ ಮಾರ್ಗದರ್ಶಕರಿದ್ದಂತೆ ಎಂದರು. ಕನ್ನಡ ನಾಡು, ನುಡಿ ಮತ್ತು ವರನಟನ ಸಾಧನೆ ಬಗ್ಗೆ ಮುಂದಿನ ತಲೆಮಾರಿಗೆ ತಿಳಿಸುವಂತಹ ಕೆಲಸವನ್ನು ಕಸಾಪ ಮಾಡಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಉಮಾಶಂಕರ್ ತಿಳಿಸಿದರು. ಡಾ ರಾಜಕುಮಾರ್ ಅವರನ್ನು ಚಲನಚಿತ್ರವೊಂದರ ಚಿತ್ರೀಕರಣ ಸಮಯದಲ್ಲಿ ನೋಡಿ ಮಾತನಾಡಿದ್ದನ್ನು ನಿವೃತ್ತ ಪ್ರಾಂಶುಪಾಲರಾದ ಡಾ ಬೋಗಣ್ಣ ಸ್ಮರಿಸಿದರು.
ರಾಜಕುಮಾರ್ ರವರಿಂದ ಸನ್ಮಾನ ಪಡೆಯುವ ಯೋಗ ನನ್ನದಾಗಿತ್ತು ಎಂದು ಸಾಹಿತಿ ಡಾ.ಚೌಡಯ್ಯ ತಿಳಿಸಿದರು. ಹೆಚ್ ಜಿ ರಾಜುರವರು ಮಾತನಾಡಿ “ಡಾ. ರಾಜಕುಮಾರ್ ಯಾವ ಪಾತ್ರದಲ್ಲಿ ಅಭಿನಯಿಸಿದರರೂ ಪರಾಕಾಯ ಪ್ರವೇಶ ಮಾಡುತ್ತಿದ್ದರು. ಆ ಪಾತ್ರಗಳೇ ನಮ್ಮ ಮುಂದೆ ಜೀವಂತವಾಗಿರುವಂತೆ ತೋರುತ್ತಿತ್ತು” ಎಂದರು. ಕಲಾವಿದ ಬೂದಿಹಾಳ್ ಕಿಟ್ಟಿ “ನಮ್ಮಂತ ಕಲಾವಿದರಿಗೆ ಅವರ ಸಜ್ಜನಿಕೆ ಸರಳತೆ ಸದಾ ಸ್ಪೂರ್ತಿದಾಯಕ” ಎಂದರು. ವಿದ್ವಾಂಸರಾದ ಬೆಟ್ಟಸ್ವಾಮಿ ಗೌಡರು ಮಾತನಾಡಿ “ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಲು ತಂದೆಯವರ ಅಪ್ಪಣೆ ಕೇಳಿದಾಗ, ನಮಗೆ ಯಾವ ಕೆಲಸವೂ ಬೇಡ,ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ನೋಡಿ ಅದರಂತೆ ವ್ಯವಸಾಯ ಮಾಡು” ಎಂದದ್ದನ್ನು ಮೆಲಕು ಹಾಕಿದರು.
ಡಾ. ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಆರಂಭವಾಯಿತು. ಕವಿ ಡಾ.ಶಿವಲಿಂಗಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ನಿವೃತ್ತ ಮುಖ್ಯಶಿಕ್ಷಕ ವಿ.ರಾಜಣ್ಣ, ಛಾಯಚಿತ್ರಗ್ರಾಹಕರ ಸಂಘದ ಪ್ರಧಾನ ಕಾರ್ಯದರ್ಶಿ ರಂಗನಾಥ್, ಕಲಾವಿದರಾದ ಚಿಕ್ಕಮಾರನಹಳ್ಳಿ ದಿನೇಶ್, ದಾ ನಾ ನರಸಿಂಹಮೂರ್ತಿ, ದೊಡ್ಡರಾಮಯ್ಯ, ರಂಗನಾಥ್, ಜ್ಯೋರ್ತಿಲಿಂಗಪ್ಪ, ಕೃಷ್ಣಯ್ಯ, ಪ್ರೆಸ್ ರಾಮಕೃಷ್ಣ, ಭವ್ಯ, ಕೀರ್ತಿ, ಇಸ್ತುರು ಗೌಡ, ರವಿಶಂಕರ್, ಜೀವನ್, ಕಿರಣ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ಮಣ್ಣೆ ಮೋಹನ್