This is the title of the web page
This is the title of the web page

ಶರಣ್ ಗೆ ಜೋಡಿಯಾದ ನಟಿ ಅಮೃತಾ ಅಯ್ಯಂಗಾರ್

ಸ್ಯಾಂಡಲ್ ವುಡ್ ನಟ ಶರಣ್ ನಟನೆಯ ಹೊಸ ಸಿನಿಮಾಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಆಯ್ಕೆಯಾಗಿದ್ದಾರೆ. ಇದು ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿ ಬರಲಿರುವ ಚಿತ್ರವಾಗಿದ್ದು, ಈ ಸಿನಿಮಾದಲ್ಲಿ ಅಮೃತಾ ಪತ್ರಕರ್ತೆಯ ಪಾತ್ರ ಮಾಡಲಿದ್ದಾರಂತೆ.

‘ಪುಗ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ’ ಸಿನಿಮಾದ ಖ್ಯಾತಿಯ ಅರವಿಂದ್ ಕುಪ್ಲಿಕರ್ ಶರಣ್ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಾರ್ಕ್ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಶರಣ್ ಪಾತ್ರ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ವಿಭಿನ್ನವಾಗಿರಲಿದ್ದು, ಎಲೆಕ್ಟ್ರಿಷಿಯನ್ ಆಗಿ ಶರಣ್ ಕಾಣಿಸಿಕೊಳ್ಳುತ್ತಿದ್ದಾರೆ. ಶರಣ್ ಹುಟ್ಟುಹಬ್ಬದ ದಿನದಂದು ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಅಧೀಕೃತ ಮಾಹಿತಿ ಹಂಚಿಕೊಂಡಿದೆ.

ಶ್ರೀಧರ ಕೃಪ ಕಂಬೈನ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದ್ದು, ಬಿ.ಬಸವರಾಜ್ ಹಾಗೂ ಶ್ರೀಧರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡುತ್ತಿದ್ದಾರೆ. ಸಂಚಾರಿ ವಿಜಯ್ ಅಭಿನಯದ ‘ಪುಗ್ಸಟ್ಟೆ ಲೈಫು ಪುರುಸೋತ್ತೇ ಇಲ್ಲ’ ಸಿನಿಮಾ ನಂತರ ಅರವಿಂದ್ ಕುಪ್ಲಿಕರ್ ಆಕ್ಷನ್ ಕಟ್ ಹೇಳುತ್ತಿರುವ ಎರಡನೇ ಸಿನಿಮಾವಿದು. ಬಾಗಲಕೋಟೆಯಲ್ಲಿ ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದ್ದು, ಉತ್ತರ ಕರ್ನಾಟಕ ಶೈಲಿ ಭಾಷೆಯಲ್ಲಿ ಶರಣ್ ಗಮನ ಸೆಳೆಯಲಿದ್ದಾರೆ ಎಂದು ನಿರ್ದೇಶಕ ಅರವಿಂದ್ ಕುಪ್ಲಿಕರ್ ತಿಳಿಸಿದ್ದಾರೆ.