ಕೆಂಗೇರಿ: ಸಾಧನೆ ಮಾಡಬೇಕು ಎಂಬ ಇಚ್ಚೆ ಇದ್ದರೆ ಖಂಡಿತ ಸಾಧಿಸಲು ಸಾಧ್ಯ,ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಖ್ಯಾತ ನಟಿ ಸಪ್ತಮಿಗೌಡ ಹೇಳಿದರು.
ಉತ್ತರಹಳ್ಳಿ ಮುಖ್ಯ ರಸ್ತೆಯ ಆರ್ಎನ್ಎಸ್ಐಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಬಿಎ ವಿಭಾಗದಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಯಾವುದೇ ಕನಸು ನನಸಾಗಬೇಕಾದರೆ ಸಾಧನೆ ಅತ್ಯಮೂಲ್ಯವಾದದ್ದು, ಜೀವನದಲ್ಲಿ ಜಯವನ್ನು ಪಡೆಯಬೇಕಾದರೆ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಆರ್ಎನ್ಎಸ್ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಎಸ್. ರಮೇಶ್ ಬಾಬು ಮಾತನಾಡಿ, ನಮ್ಮ ಭಾರತ ದೇಶದ ಸಂಸ್ಕೃತಿ ಬಹಳ ಮಹತ್ವಪೂರ್ಣದ್ದಾಗಿದೆ. ಎಂಬಿಎ ವಿಭಾಗದ ವತಿಯಿಂದ ಎಲ್ಲಾ ರೀತಿಯ ಕಲಾರೂಪಗಳ ನೃತ್ಯ ಪ್ರದರ್ಶನ ನೀಡುವುದರ ಜತೆಗೆ ಈ ತಾಂತ್ರಿಕ ಯುಗದಲ್ಲಿ ನಮ್ಮ ದೇಶದ ಸಂಸ್ಕೃತಿಯ ಹಿರಿಮೆಯನ್ನು ಪಸರಿಸುವ ಬಗ್ಗೆ ವಿದ್ಯಾರ್ಥಿಗಳು ಚಿಂತಿಸಬೇಕು ಎಂದರು.
2024 ರ ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್,ವರ್ತೂರ್ ಸಂತೋಷ್, ಆರ್ ಎನ್ ಎಸ್ ಐ ಟಿ ಕಾಲೇಜಿನ ನಿರ್ದೇಶಕ ಡಾ. ಎಂ.ಕೆ. ವೆಂಕಟೇಶ, ಮುಖ್ಯ ತಾಂತ್ರಿಕ ಅಧಿಕಾರಿ ಮುರಳಿ ಕೃಷ್ಣ, ಮೈಸೂರು ಕಾಲೇಜಿನ ಎಂಬಿಎ ವಿಭಾಗದ ಡೀನ್ ಡಾ. ಯು ಬೋಜಣ್ಣ, ಉತ್ತರಹಳ್ಳಿ ಮುಖ್ಯ ರಸ್ತೆಯ ಕಾಲೇಜಿನ ಎಂ.ಬಿ.ಎ ವಿಭಾಗದ ಮುಖ್ಯಸ್ಥ ಡಾ. ಜಿವಿಎಂ ಶರ್ಮ ಹಾಗೂ ಕಾರ್ಯಕ್ರಮದ ನಿರ್ದೇಶಕ ಡಾ. ದೀಪಕ್ ಕುಮಾರ್ ಮತ್ತು ಡಾ. ರಾಕೇಶ್ ನಾಗರಾಜ್ ಉಪಸ್ಥಿತರಿದ್ದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ರಾಜ್ಯದ ಸುಮಾರು ಐವತ್ತಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡು ಕನ್ನಡ ನಾಡು ನುಡಿಯ ಹಿರಿಮೆಯನ್ನು ಸಾರುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.