ಕೋಲಾರ: ಕೋಲಾರ ಜಿಲ್ಲೆಯನ್ನು ವ್ಯಸನಮುಕ್ತ ಜಿಲ್ಲೆಯನ್ನಾಗಿಸುವ ಗುರಿಯನ್ನು ನಾವೆಲ್ಲರೂ ಹೊಂದಬೇಕು. ಸ್ವಸ್ಥ ಸಮಾಜ ನಿರ್ಮಿಸುವ ಧ್ಯೇಯ ನಮ್ಮದಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ್ ಅವರು ಅಭಿಪ್ರಾಯ ಪಟ್ಟರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ, ತಂಬಾಕು ಸೇವನೆ ವಿರುದ್ಧ ಜಾಗೃತಿ ಮ್ಯಾರಥಾನ್ ಹಾಗೂ ವಾಕಥಾನ್ ಕಾರ್ಯಕ್ರಮಕ್ಕೆ ಗಾಳಿ ಬುರುಡೆಗಳನ್ನು ಹಾರಿಬಿಟ್ಟು ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ಕೆಲವು ತಿಂಗಳುಗಳಿಂದ ಮಾದಕ ದ್ರವ್ಯಗಳ ಬಳಕೆ ವಿರುದ್ಧ ಪೊಲೀಸ್ ಇಲಾಖೆ ನಡೆಸಿದ ಅಭಿಯಾನ ಇಲಾಖೆಗೆ ಸಮಾಜದ ಮೇಲಿನ ಕಾಳಜಿಯನ್ನು ತೋರಿಸುತ್ತದೆ.
ಇಂದು ಸಹ ಇಲಾಖೆ ನಗರದ ಪ್ರಮುಖ ಬೀದಿಗಳಲ್ಲಿ ಮ್ಯಾರಥಾನ್ ಹಾಗೂ ವಾಕಥಾನ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಪೊಲೀಸ್ ಇಲಾಖೆಯ ಈ ಕೆಲಸ ಅತ್ಯಂತ ಶ್ಲಾಘನಿಯ ಎಂದು ಅವರು ತಿಳಿಸಿದರು.ಮನುಷ್ಯನನ್ನು ಕೊಲ್ಲುವ ಅಪಾಯಕಾರಿ ವಸ್ತು ತಂಬಾಕು ಆಗಿದ್ದು, ಇದರ ಸೇವನೆಯಿಂದ ವಿವಿಧ ಕಾಯಿಲೆಗಳು ಬರುತ್ತವೆ. ಜನರು ತಂಬಾಕು ಸೇವನೆಯಿಂದ ದೂರವಿರಬೇಕು ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭಾಸ್ಕರ್ ಅವರು ಮಾತನಾಡಿ ‘ತಂಬಾಕಿನಲ್ಲಿ 6 ಸಾವಿರ ರಾಸಾಯನಿಕಗಳಿರುತ್ತವೆ. ಈ ವಿಷಕಾರಿ ವಸ್ತು ಸೇವನೆಯಿಂದ ಜಗತ್ತಿನಲ್ಲಿ ಪ್ರತಿ ವರ್ಷ 5.4 ಮಿಲಿಯನ್ ಹಾಗೂ ಭಾರತದಲ್ಲಿ 8-9 ಲಕ್ಷ ಜನ ಸಾಯುತ್ತಿದ್ದಾರೆ. ಶೇ 90 ರಷ್ಟು ಕಾನ್ಸರ್ ಕಾಯಿಲೆ ತಂಬಾಕಿನಿಂದ ಬರುತ್ತದೆ’ ವ್ಯಸನ ಮುಕ್ತವಾಗಲು ಇಚ್ಚಾಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಕೋಲಾರ ನಗರ, ಗ್ರಾಮಾಂತರ, ಹಾಗೂ ಮುಳಬಾಗಿಲು ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.