ದೇವನಹಳ್ಳಿ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಸಂಬಂಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಗತ್ಯ ಸೇವೆಯಲ್ಲಿರುವ ಗೈರು ಹಾಜರಿ ಮತದಾರರಿಗೆ ಅಂಚೆ ಮತದಾನ ಮಾಡಲು ಏಪ್ರಿಲ್ 19 ರಿಂದ 21 ವರೆಗೆ ಅವಕಾಶ ಕಲ್ಪಿಸಲಾಗಿದ್ದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ದೇವನಹಳ್ಳಿ ತಾಲ್ಲೂಕಿನ ತಾಲ್ಲೂಕು ಕಚೇರಿ, ಮಿನಿ ವಿಧಾನಸೌಧವನ್ನು ಅಂಚೆ ಮತದಾನ ಕೇಂದ್ರವನ್ನಾಗಿ ಗುರುತಿಸಲಾಗಿದ್ದು ಇಲ್ಲಿ ಅಂಚೆ ಮತದಾನ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಅಂಚೆ ಮತದಾನ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 327 ಗೈರುಹಾಜರಿ ಮತದಾರರಿದ್ದು ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 49 ಮತದಾರರು, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 68 ಮತದಾರರು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 109 ಮತದಾರರು ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 101 ಗೈರುಹಾಜರಿ ಮತದಾರರು ಇದ್ದಾರೆ.
ಮತದಾನದ ದಿನದಂದು ಕರ್ತವ್ಯ ನಿರ್ವಹಿಸುವ ನೌಕರರನ್ನು ಗೈರು ಹಾಜರಿ ಮತದಾರರು ಎಂದು ಚುನಾವಣಾ ಆಯೋಗ ಪರಿಗಣಿಸಿ ಅವರಿಗೆ ಮುಂಚಿತವಾಗಿ ಮತದಾನ ಮಾಡಲು ಚುನಾವಣೆ ಆಯೋಗ ಅವಕಾಶ ಕಲ್ಪಿಸಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗೈರುಹಾಜರಿ ಮತದಾರರು ಏಪ್ರಿಲ್ 19(ಶುಕ್ರವಾರ),20(ಶನಿವಾರ),21(ಭಾನುವಾರ) ರಂದು ಅಂಚೆ ಮತದಾನ ನಡೆಯಲಿದ್ದು ದೇವನಹಳ್ಳಿ ತಾಲ್ಲೂಕಿನ ಮಿನಿ ವಿಧಾನಸೌಧದ ತಾಲ್ಲೂಕು ಕಚೇರಿಯಲ್ಲಿ ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯ ಸಮಯದಲ್ಲಿ ಬಂದು ಮತದಾನ ಮಾಡಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ಹೇಳಿದರು.