ಹೊಸಕೋಟೆ: ಒಕ್ಕೂಟವು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಒದಗಿಸಿರುವ ಸೌಲಭ್ಯಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಿ ಮನವರಿಕೆ ಮಾಡಿಕೊಡಲು ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು ಗಮನಹರಿಸಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸಿ.ಮಂಜುನಾಥ್ ಹೇಳಿದರು.
ಅವರು ಸಮೀಪದ ಶಿಬಿರ ಕಚೇರಿಯಲ್ಲಿ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಒಕ್ಕೂಟವು ಸದಸ್ಯರಿಗಷ್ಟೇ ಅಲ್ಲದೆ ಅವರ ಕುಟುಂಬದವರ ಹಿತ ಕಾಪಾಡಲು ವಿಶಿಷ್ಟವಾದ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ರಾಸುಗಳ ವಿಮೆ, ಸದಸ್ಯರ ವೈಯಕ್ತಿಕ ವಿಮೆ, ಅಪಘಾತ ವಿಮೆಗೆ ಶೇ.50ರಷ್ಟು ಸಹಾಯಧನ ನೀಡುತ್ತಿದೆ.
ಎಸ್ಎಸ್ಎಲ್ಸಿ ನಂತರದ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿದೆ. ಪ್ರಸ್ತುತ ಯಶಸ್ವಿನಿ ವಿಮೆಯ ನೋಂದಣಿ ಪ್ರಗತಿಯಲ್ಲಿದ್ದು ಪ್ರತಿಯೊಬ್ಬ ಸದಸ್ಯರೂ ಸಹ ನೋಂದಣಿಯಾಗಲು ತಿಳಿವಳಿಕೆ ನೀಡಬೇಕು. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ರಾಸುಗಳು ಮರಣವಾಗುತ್ತಿದ್ದು, ವಿಮೆಗೆ ಒಳಪಡದ ಸದಸ್ಯರು ತೀವ್ರ ಆರ್ಥಿಕ ನಷ್ಟಕ್ಕೆ ಒಳಗಾಗುತ್ತಿದ್ದಾರೆ.
ಈ ಬಗ್ಗೆ ಒಕ್ಕೂಟವು ಇಂತಹ ಸದಸ್ಯರಿಗೆ ಸಹಾಯಧನ ನೀಡುತ್ತಿದೆ. ಆರ್ಥಿಕ ನಷ್ಟಕ್ಕೆ ಒಳಗಾಗುವುದನ್ನು ನಿವಾರಿಸಿಕೊಳ್ಳಲು ಕಡ್ಡಾಯವಾಗಿ ರಾಸುಗಳನ್ನು ವಿಮಾ ಯೋಜನೆಗೆ ಒಳಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪ್ರತಿವರ್ಷ ಪ್ರತಿಷ್ಠಿತ ಆಸ್ಪತ್ರೆಗಳ ತಜ್ಞ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುತ್ತಿದ್ದು ಅಗತ್ಯವಿರುವವರಿಗೆ ಉಚಿತವಾಗಿ ಹೆಚ್ಚಿನ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಇದುವರೆವಿಗೂ ಕೇವಲ ಆಡಳಿತ ಮಂಡಳಿಗೆ ಮಾತ್ರ ಅವಕಾಶವಿದ್ದ ಗುಜರಾತ್ನ ಅಮೂಲ್ ಡೈರಿಗೆ ಭೇಟಿ ನೀಡುವ ಪ್ರವಾಸವನ್ನು ಇದೀಗ ಮುಖ್ಯ ಕಾರ್ಯನಿರ್ವಾಹಕರಿಗೂ ಸಹ ವಿಸ್ತರಿಸಲಾಗಿದೆ ಎಂದರು.ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವಾಗಿ 12 ಲಕ್ಷ ರೂ., ವಿಮೆರಹಿತ ಮೃತಪಟ್ಟ ರಾಸುಗಳಿಗೆ ಪರಿಹಾರವಾಗಿ 11 ಲಕ್ಷ ರೂ. ಒಳಗೊಂಡಂತೆ ಒಟ್ಟು 24 ಲಕ್ಷ ರೂ.ಗಳನ್ನು ವಿತರಿಸಲಾಯಿತು.
ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ: ಶಿವಾಜಿನಾಯಕ್, ಸಹಾಯಕ ವ್ಯವಸ್ಥಾಪಕ ಶ್ರೀರಾಮ್,ಒಕ್ಕೂಟದ ವ್ಯವಸ್ಥಾಪಕ ಚಂದ್ರಪ್ಪ, ವಿಸ್ತರಣಾಧಿಕಾರಿ ಗಳಾದ ವಿನಯ್, ರಮೇಶ್, ಪವಿತ್ರ, ರಘುನಾತ್, ವಿದ್ಯಾಶ್ರೀ ಇನ್ನಿತರರು ಭಾಗವಹಿಸಿದ್ದರು.