ಬೆಂಗಳೂರು: ಅನುದಾನ ತಾರತಮ್ಯ ಸಂಬಂಧ ರಾಜ್ಯ ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದ್ದ ಖಂಡನಾ ನಿರ್ಣಯವನ್ನು ವಿರೋಧಿಸಿ ಪ್ರತಿಪಕ್ಷ ಧರಣಿ ನಡೆಸಿದ ಪರಿಣಾಮ ಕಲಾಪವನ್ನು ಮುಂದೂಡಿದ ಪ್ರಸಂಗ ನಡೆಯಿತು.
ಇಂದು ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಮುಂದಿನ ಬಾವಿಗೆ ಇಳಿದು ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಘೋಷಣೆ ಕೂಗತೊಡಗಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಖಂಡನಾ ನಿರ್ಣಯದ ವಿರುದ್ಧ ಘೋಷಣೆ ಕೂಗತೊಡಗಿದ್ದಾಗ ಆಡಳಿತ ರೂಢ ಪಕ್ಷದ ವತಿಯಿಂದ ತಮ್ಮ ನಿಲುವನ್ನು ಸಮರ್ಥಿಸಿ ಮಾತನಾಡಿದರು.ಎರಡು ಕಡೆ ಸದಸ್ಯರ ಆರೋಪ ಪ್ರತ್ಯಾರೋಪಗಳ ನಡುವೆ ಗದ್ದಲಪರಿಸ್ಥಿತಿ ಉಂಟಾದ ಪರಿಣಾಮ ಸಭಾಧ್ಯಕ್ಷ ಯು.ಟಿ.ಖಾದರ್ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.
ತದನಂತರ ಪುನಃ ಕಲಾಪ ಆರಂಭಗೊಂಡಾಗ ಧರಣಿ ಮುಂದುವರೆಸಿದ ಪರಿಣಾಮ ಕಲಾಪವನ್ನು ಸಭಾಧ್ಯಕ್ಷರು ಸೋಮವಾರಕ್ಕೆ ಮುಂದೂಡಿದರು.