ಎಸ್ಎಸ್ಎಲ್ಸಿ ಬರುವಾಗ ಮಕ್ಕಳಿಗೆ ಹದಿ ಹರೆಯ ಅವರ ಹಾರ್ಮೋನುಗಳ ವ್ಯತ್ಯಾಸ ವಾತಾವರಣದ ಒತ್ತಡ, ಶಾಲೆಯ ಸ್ಪರ್ಧೆಗಳ ಜೊತೆಗೆ ಹೆಚ್ಚಿನ ಪರ್ಸೆಂಟೇಜ್ ತಗೆಯಬೇಕೆಂಬ ತಂದೆ ತಾಯಿಗಳ ಹೇರಿಕೆಯ ಮಧ್ಯ ತಮ್ಮ ಓದು ಕನಸುಗಳ ಜೊತೆಗೆ ಜೀವನ ಎದುರಿಸುತ್ತ ಇರುತ್ತಾರೆ.
ತಂದೆ ತಾಯಿಗಳು ಮಕ್ಕಳಿಗೆ fees ಕಟ್ಟುವುದು ಹೊಟ್ಟೆ ತುಂಬಾ ಊಟಕ್ಕೆ ಹಾಕಿ ಅವರು ಕೇಳಿದ ಪದಾರ್ಥಗಳನ್ನು ಕೊಂಡು ಕೊಟ್ಟರೆ ಸಾಲದು. ಅಧ್ಯಾಪಕರು ಕೇವಲ ಪಾಠ ಮಾಡಿ ಉತ್ತಮ ಅಂಕ ಬರುವಂತೆ ಮಾಡಿದರೆ ಸಾಲದು. ಮಕ್ಕಳ ಭವಿಷ್ಯ ಹಾಗೂ ಜೀವನ ರೂಪಿಸುವ ಎರಡು ಪ್ರಧಾನ ಅಡಿಪಾಯ ಹಾಕುವುದು ಶಾಲೆ ಹಾಗೂ ಮನೆಯಲ್ಲಿ ಹೀಗಾಗಿ ಪೋಷಕರು ಮತ್ತು ಅಧ್ಯಾಪಕರ ಕೊಡುಗೆ ಬಹಳ ಮಹತ್ವ ಪಡೆಯುತ್ತದೆ.
ಮಕ್ಕಳ ಭವಿಷ್ಯದಲ್ಲಿ ವಿದ್ಯಾಭ್ಯಾಸದಲ್ಲಿ ಶಾಲೆಯವರ ಜೊತೆಗೆ ಹೆಚ್ಚಿನ ಜವಾಬ್ದಾರಿ ಪೋಷಕರದ್ದಾಗಿರುತ್ತದೆ. ಪೋಷಕರಾಗಿ ನಮ್ಮ ಮಕ್ಕಳ ಬುದ್ಧಿಮತ್ತೆ ಹಾಗೂ ಕ್ಷಮತೆ ನಮಗೆ ಹೆಚ್ಚು ತಿಳಿದಿರಬೇಕು. ಅವರ ಕ್ಷಮತೆಗೆ ತಕ್ಕ ಸವಾಲುಗಳನ್ನು ಅವರಿಗೆ ನೀಡಬೇಕು. ಇತ್ತೀಚಿಗೆ ಒಂದೆರಡು ವರ್ಷಗಳಲ್ಲಿ ಮೂರು ಜನ 9-10 ನೇ ತರಗತಿಯ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳನ್ನು ನೋಡಿದ್ದೇನೆ. ಅವರ ಓದಿನ ಒತ್ತಡ ಇರಲಿ ಬೇರೆ ವೈಯಕ್ತಿಕ ಕಾರಣ ಇರಬಹುದು ಆದರೂ ಕೂಡ ಪೋಷಕರು ಹೆಚ್ಚು ಗಮನವನ್ನು ಮಕ್ಕಳ ಬಗೆಗೆ ಕೊಡಬೇಕಾಗುತ್ತದೆ. ಊಟ ಬಟ್ಟೆ ಕೊಡಿಸುವುದು. ಹೊರಗೆ ತಿರುಗಿಸಿಕೊಂಡು ಬರುವುದರ ಜೊತೆಗೆ ದಿನ ನಿತ್ಯದ ಕನಿಷ್ಠ 30 ನಿಮಿಷವಾದರೂ ಅವರ ದಿನಚರಿ ಅಗು ಹೋಗುಗಳ ಬಗೆಗೆ ಮಾತನಾಡಬೇಕು, ಮಕ್ಕಳ ಸಪ್ಪಗಿದ್ದರೆ ಕಾರಣ ತಿಳಿದು ಅದರ ಪರಿಹಾರ ಮಾಡಬೇಕು.
ಸಣ್ಣ ವಯಸ್ಸಿನಲ್ಲಿ ಎಲ್ಲವನ್ನೂ ಮನೆಗೆ ಬಂದ ಮೇಲೆ ಮರೆಯುತ್ತಿದ್ದ ಮಕ್ಕಳು ಹೆಚ್ಚು ಹೆಚ್ಚು ಶಾಲೆಯ ಮತ್ತು ಸ್ನೇಹಿತರ ಜೊತೆಗೆ ಇರುತ್ತ ಬೇರೆ ಬೇರೆ ರೀತಿಯ ಜನರ ಜೊತೆಗೆ ಬೆರೆಯುತ್ತ ಹೊಸ ಹೊಸದನ್ನು ಕಲಿಯುತ್ತಾರೆ. ಅವರ ನಡವಳಿಕೆ ಹವ್ಯಾಸ ಅಭ್ಯಾಸಗಳಲ್ಲಿ ವ್ಯತ್ಯಾಸ ಬಂದಾಗ ಅದನ್ನು ಗಮನಿಸಿ ಮಾತನಾಡಿಸಿ ಸಾಂತ್ವನ ಹೇಳಿ, ಪ್ರೀತಿ ಮಾಡಿ ಆರೈಕೆ ಮಾಡುವುದು ಪೋಷಕರ ಕರ್ತವ್ಯವಾಗಿದೆ.
ಪೋಷಕರು ನಮಗೆ ನಮ್ಮದೇ ಕೆಲಸ ಕಾರ್ಯಗಳು ಕೆಲಸದ ಸ್ಥಳದ ಒತ್ತಡ ಇರುತ್ತವೆ ಎಂದು ಸಬೂಬು ಹೇಳಬಹುದು ಆದರೆ ಅದರಿಂದ ಮಕ್ಕಳ ಜೀವಕ್ಕೆ ಹಾನಿ ಅಥವಾ ಮಾನಸಿಕ ಸಮಸ್ಯೆಗಳಿಗೆ ತುತ್ತಾದರೆ ಅವರ ಭವಿಷ್ಯ ಕತ್ತಲೆಗೆ ಬಿದ್ದಂತೆ ಹೀಗಾಗಿ ಮಕ್ಕಳಿಗೆ ದಿನದ 1ಗಂಟೆ ಸಮಯವನ್ನು ಮೀಸಲು ಇಡಲೇ ಬೇಕು. ಶಾಲೆಯ ಓದಿನ ಬಗೆಗೆ ಕೇಳದೇ ಹೋದರು ಅವರ ಯೋಗಕ್ಷೇಮ, ಕಷ್ಟಗಳು, ಇಷ್ಟಗಳು ಯಾವೆಲ್ಲ ವಿಷಯಕ್ಕೆ ಅವರಿಗೆ ಭಯವಾಗುತ್ತದೆ ಎಂಬ ಮಾತುಗಳನ್ನು ಆಡಿ ಅವರ ಜೊತೆಗೆ ಉತ್ತಮ ಗುಣ ಮಟ್ಟದ ಸಮಯವನ್ನು ಕಳೆಯಬೇಕು.
ಎಲ್ಲರಿಗೂ, ಮಕ್ಕಳಿಗೆ ಆಗಲೀ ದೊಡ್ಡವರಿಗೆ ಆಗಲಿ ಧೈರ್ಯ, ಎದೆಗಾರಿಕೆ ಹುಟ್ಟಿನಿಂದ ಬಂದಿರುವುದಿಲ್ಲ. ಅವರು ಬೆಳೆದ ವಾತಾವರಣ ನೋಡಿ ಕಲಿಯುವುದಿರುತ್ತದೆ . ಇಂದಿನ ಕಾಲದಲ್ಲಿ ಎಲ್ಲರೂ ತಮ್ಮ ಬಿಜಿ ಜೀವನ ಶೈಲಿಯಲ್ಲಿ ಯಾರ ಬಗಗೆ ಆದರೂ ಕಾಳಜಿ ತೆಗೆದುಕೊಳ್ಳುವ ತಾಳ್ಮೆಯನ್ನು ಬೆಳೆಸಿಕೊಳ್ಳುವುದಿಲ್ಲ. ಹೆಚ್ಚಿನ ಜನರಿಗೆ ಪಾಶ್ಚಾತ್ಯ ಸಂಸ್ಕೃತಿ ಮತ್ತು ರೀತಿ ನೀತಿಗಳ ಪ್ರಭಾವದ ಕಋಣ ಮಕ್ಕಳನ್ನು ಅರಿತು ತಿಳುವಳಿಕೆ ಹೇಳಿ ಬೆಳೇಸದೇ ಇರುವ ಕಾರಣ ಮಕ್ಕಳು ಆತ್ಮ ಹತ್ಯೆ ಅಥವಾ ವ್ಯಸನಗಳಿಗೆ ಮೊರೆ ಹೋಗುವಂತೆ ಅಗಿದೆ. ಇಂತಹ ಅನಾಹುತ ತಡೆಯುವ ನಿಟ್ಟಿನಲ್ಲಿ ಪೋಷಕರು ಹಾಗೂ ಶಾಲೆಗಳು ಕೆಲಸ ಮಾಡಬೇಕು.
ಮಕ್ಕಳ ಕೈಗೆ ಕೊಡುವ ಮೊಬೈಲ್ 60% ಅನಾಹುತಗಳಿಗೆ ಕಾರಣವಾಗಿದೆ, ಕರೋನಾ ಸಮಯದಲ್ಲಿ ಮೊಬೈಲ್ ಮೂಲಕ ಪಾಠವನ್ನು ಆನ್ಲೈನ್ ಆಫ್ ಲೈನ್ ನಲ್ಲಿ ಶಾಲೆಗಳು ಮಾಡಿದರು ಅವರ ಉದ್ದೇಶ ಒಳ್ಳೆಯದೇ ಇದ್ದರೂ ಅದರಿಂದ ಆದ ಅನಾಹುತಗಳು ಬಹಳ, ಮಕ್ಕಳು ಆಟ ಆಡುವುದು ಬೇಡದ ವಿಡಿಯೋಗಳನ್ನು ನೋಡುವುದು, ಅನವಶ್ಯಕ ಹಾಗೂ ಅಪಾಯಕಾರಿ ವಿಷಯಗಳನ್ನು ತಿಳಿದು ಕೊಳ್ಳುವ ಹಂಬಲದಲ್ಲಿ ಜೀವಕ್ಕೂ ಕುತ್ತು ತಂದುಕೊಂಡ ಉದಾಹರಣೆಗಳಿಗೆ ಏನೂ ಕಡಿಮೆ ಇಲ್ಲ.
ಈಗಿನ ಸಂದರ್ಭದಲ್ಲಿ ಮಕ್ಕಳು ಹದಿ ಹರೆಯಕ್ಕೆ ಬರುವಾಗ ಪೋಷಕರು ಮಕ್ಕಳ ಸ್ನೇಹಿತರಾಗಲು ಪ್ರಯತ್ನಿಸಬೇಕು. ನಮ್ಮ ಸುಭಾಷಿತಕಾರರು ಹೇಳಿದಂತೆ “ಷೋಡಶೆ ವರ್ಷೆ ಪ್ರಾಪ್ತೇಷು ಪುತ್ರಮ್ ಮಿತ್ರಮ್ ವದಾಚರೇತ್ ” ದಿನದ ಸ್ವಲ್ಪ ಸಮಯ ಮಕ್ಕಳಿಗಾಗಿ ಮೀಸಲಿಟ್ಟು ತಂದೆಯೇ ಇರಲಿ ತಾಯಿಯೇ ಇರಲಿ ಮಕ್ಕಳಿಗೆ ಅವರ ಜೀವನದ ಗುರಿ ಓದುವ ಆಸೆಗಳನ್ನು ತಿಳಿದು ಸ್ಪೂರ್ತಿದಾಯಕ ವಿಷಯಗಳನ್ನು ಉತ್ತಮ ಉದಾಹರಣೆಗಳನ್ನು ಪ್ರೇರಣಾದಾಯಕ ಮಾತುಗಳಿಂದ ಅವರನ್ನು ಪ್ರೋತ್ಸಾಹಿಸಿ ಹುರಿದುಂಬಿಸಿ ಗುರಿಯನ್ನು ನೀಡಿ ಇಂತಹದನ್ನು ಸಾಧಿಸಿದರೆ ನಿಮಗೆ ಇಷ್ಟವಾದ ಪದಾರ್ಥ ಕೊಡಿಸುವುದು ಅಥವಾ ಪ್ರಯಾಣಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಅವರಿಗೆ ಜೀವನದ ಮಹತ್ವವನ್ನು ಹೇಳಬೇಕು. 13-25 ವರ್ಷವಯಸ್ಸು ಬಹಳ ಮಹತ್ವದ ಘಟ್ಟವಾಗಿರುತ್ತದೆ.
ಮಕ್ಕಳ ಏಳಿಗೆ ಮತ್ತು ಅವನತಿ ಎರಡೂ ಕೂಡ ಇದೇ ಸಮಯದಲ್ಲಿ ಹೆಚ್ಚು ಆಗುವುದು ಆದರೆ ನಾವು ಯಾವ ರೀತಿಯ ಮಾರ್ಗವನ್ನು ಅವರಿಗೆ ತೋರಿಸುತ್ತೇವೆಯೋ ಅದರ ಅನುಭವದ ಮೇಲೆ ಅವರ ಏಳುಬೀಳುಗಳು ಅವಲಂಬಿತವಾಗಿದೆ.ಮಕ್ಕಳಿಗೆ ಹೆದರಿಸಿ ನಮ್ಮದೇ ಇಷ್ಟದ ರೀತಿಯಲ್ಲಿ ಬೆಳೆಸಿದರೂ ಕೂಡ ಆತ್ಮ ವಿಶ್ವಾಸದ ಕೊರತೆಯಾಗಿ ದಬ್ಬಾಳಿಕೆಯಲ್ಲಿ ಬೆಳೆದಂತೆ ಆಗುತ್ತದೆ. ಅವರ ಇಷ್ಟದಂತೆ ಬೆಳೆಯಲು ಬಿಟ್ಟಾಗ ಸ್ವೇಚ್ಛಾಚಾರಿಗಳಾಗಿ ಬೇಡದ ಅನಾಹುತಗಳಿಗೂ ಕಾರಣವಾಗುತ್ತದೆ. ಆದ್ದರಿಂದ ಅವರ ಇಷ್ಟದ ವಿಷಯಗಳಿಗೆ ನಮ್ಮ ಮೇಲ್ವಿಚಾರಣೆಯ ಮೂಲಕ ತಮ್ಮ ಗುರಿ ಆಸೆಗಳನ್ನು ಪೂರೈಸಿಕೊಳ್ಳಲು ಬಿಟ್ಟಾಗ ಮಕ್ಕಳ ಅಭಿವೃದ್ಧಿ ಹಾಗೂ ನಮ್ಮ ಕರ್ತವ್ಯ ಸರಿಯಗಿ ಮಾಡಿದಂತೆ.
ಶಾಲೆಗಳಲ್ಲಿ ಕೂಡ ಮಕ್ಕಳಿಗೆ ಕೆಲವು ಸೂಕ್ಷ್ಮ ವಿಷಯಗಳ ಆಪ್ತ ಸಮಾಲೋಚನೆಯನ್ನು ಮಾಡಿಸಬೇಕು, ಬದುಕಿನ ಮಹತ್ವ, ಭವಿಷ್ಯ ರೂಪಿಸಿಕೊಳ್ಳುವ ಕಲೆ, ಹದಿ ಹರೆಯದಲ್ಲಿ ಕಾಡುವ ಸಮಸ್ಯೆಗಳ ಪರಿಹಾರಕ್ಕೆ ತಿಂಗಳಿಗೆ 2 ತಾಸುಗಳ ಕೌನ್ಸಿಲಿಂಗ್ ಏರ್ಪಡಿಸಿದರೆ ಅದೊಂದು ಉತ್ತಮ ನಡೆಯಾಗಿ ಮಕ್ಕಳಲ್ಲಿ ತಿಳುವಳಿಕೆ ಅತ್ಮ ವಿಶ್ವಾಶ ತುಂಬಿದಂತೆ ಆಗುತ್ತದೆ. ಹಲುವು ದೊಡ್ಡ ಶಾಲೆಗಳಲ್ಲಿ ಇಂತಹ ಆಪ್ತ ಸಮಾಲೋಚನೆಯ ಸಮಯವನ್ನು ಮೀಸಲಿಟ್ಟು ಮಾಡುತ್ತಾರೆ. ಬಹಳಷ್ಟು ಶಾಲೆಗಳು ಇಂತಹ ಪದ್ಧತಿಯನ್ನು ಅಳವಡಿಸಿಕೊಂಡರೆ ಆತ್ಮ ಹತ್ಯೆ, ವ್ಯಸನಗಳಿಗೆ ಗುರಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುವ ಮಕ್ಕಳ ಭವಿಷ್ಯವನ್ನು ತಿದ್ದಿ ತೀಡಿ ಉಜ್ವಲ ಮಾಡಬಹುದಾಗಿದೆ.
ಮಾಧುರಿ ದೇಶಪಾಂಡೆ, ಬೆಂಗಳೂರು