ಶಿಡ್ಲಘಟ್ಟ: ಎಲ್ಲರಿಗೂ ಕುತೂಹಲ..! ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ?, ನಾಮಪತ್ರ ಸಲ್ಲಿಕೆ ಆರಂಭವಾಗಿ ಎರಡು ದಿನ ಕಳೆದಿದೆ. ಕಾಂಗ್ರೆಸ್ ಕಾರ್ಯಕರ್ತರ ಸಹನೆ ಕಟ್ಟೆಯೊಡೆದಿದೆ. ಕೋಲಾರಕ್ಕೆ ರಾಹುಲ್ ಗಾಂಧಿ ಬಂದು ಹೋದ ಮೇಲೆ ಕೋಲಾರ ಮತ್ತು ಶಿಡ್ಲಘಟ್ಟ ಅಭ್ಯರ್ಥಿಗಳು ಯಾರು ಆಗುತ್ತಾರೆ ಎಂಬುದು ಸ್ಪಷ್ಟವಾಗಲಿದೆ.
ಶಿಡ್ಲಘಟ್ಟದಲ್ಲಿ ಮೂರು ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ತುದಿಗಾಲ ಮೇಲೆ ನಿಂತಿದ್ದಾರೆ. ಆನೂರು ಪುಟ್ಟು ಆಂಜನಪ್ಪ, ಎಬಿಡಿ ರಾಜೀವ್ ಗೌಡ. ಇವರಿಬ್ಬರ ನಡುವೆ ಹಾಲಿ ಶಾಸಕರೇ ಅಭ್ಯರ್ಥಿ ಎಂದು ಘೋಷಿಸಿದರೂ ಅಚ್ಚರಿಯಿಲ್ಲ. ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ಈಗಾಗಲೇ ತಮ್ಮ ಪ್ರಚಾರ ಆರಂಭಿಸಿದ್ದಾರೆ. ರಾಜೀವ್ ಗೌಡ ಅವರಿಗೆ ಹಾಲಿ ಶಾಸಕರು ಬಹಿರಂಗವಾಗಿ ಬೆಂಬಲ ಸೂಚಿಸಿ ದ್ದಾಗಿದೆ.
ಆದಾಗ್ಯೂ ಪುಟ್ಟು ಆಂಜನಪ್ಪ “ ಅಂತಿಮ ಹಂತದಲ್ಲಿ ನಾನೇ ಅಭ್ಯರ್ಥಿಯಾಗುತ್ತೇನೆ” ಎಂಬ ವಿಶ್ವಾಸ ಹೊಂದಿದ್ದಾರೆ. ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಜನಸಾಮಾನ್ಯರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿರುವ ಇವರು ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಟಿಕೆಟ್ಟು ಸಿಗದೇ ಇದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಉಳಿಯುವ ಸಾಧ್ಯತೆ ಹೆಚ್ಚು ಇದೆ. ಹಾಲಿ ಶಾಸಕರು ಬೆಂಬಲಿಗರು ಮತ್ತು ಮುಖಂಡರು ರಾಜೀವ್ ಗೌಡ ಅವರೊಂದಿಗೆ ಮನೆಮನೆಗೂ ಹೋಗಿ ಮತಯಾಚನೆ ಮಾಡುತ್ತಿದ್ದಾರೆ.
ಈ ನಡುವೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.ಕಾಂಗ್ರೇಸ್ ಪಕ್ಷದಿಂದ ಯಾರೂ ಸುಳಿವೇ ಇಲ್ಲ. ಕಾರ್ಯಕರ್ತರು ಪಕ್ಷದ ಕಛೇರಿ ಬಳಿ ಕುಳಿತು ಯೋಚನಾಮಗ್ನರಾಗಿದ್ದಾರೆ. ಕೋಲಾರಕ್ಕೆ 16 ರಂದು ರಾಹುಲ್ ಗಾಂಧಿ ಆಗಮಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.ಆ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಜನರನ್ನು ಸಂಘಟಿಸುವ ಉದ್ದೇಶದಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಸರನ್ನು ಇನ್ನೂ ಪ್ರಕಟಮಾಡಿಲ್ಲ.
ಆನಂತರ ಹೆಸರು ಹೊರಬೀಳಲಿದೆ.ತ್ರಿವೇಣಿ ಸಂಗಮವಾಗಿ ಪಕ್ಷಕ್ಕೆ ಬಲ ಬರುವುದೋ,? ಮನೆಯೊಂದು- ಮೂರು ಬಾಗಿಲು ಎಂಬಂತಾಗುವುದೋ? ಕಾದು ನೋಡೋಣ.
Leave a Review