ಈ ಬಣ್ಣದ ಲೋಕನೇ ಹಂಗೆ. ಇವತ್ತು ಸ್ಟಾರ್ ಆದವರು ನಾಳೆ ಟಾರ್ ರೋಡ್ನಲ್ಲಿ ಇದ್ದರೆ, ಟಾರ್ ರೋಡ್ನಲ್ಲಿ ಇದ್ದವರು ಇಲ್ಲಿ ಏಕಾಏಕಿ ಸ್ಟಾರ್ ಆಗ್ಬಿಡ್ತಾರೆ. ಉದಾಹರಣೆಗೆ ಸನ್ನಿ ಡಿಯೋಲ್ ಅವರನ್ನೇ ತೆಗೆದುಕೊಳ್ಳಿ.ಹೌದು, ಸನ್ನಿ ಡಿಯೋಲ್ .. ಒಂದ್ಕಾಲದ ಸೂಪರ್ ಸ್ಟಾರ್. 90ರ ದಶಕದಲ್ಲಿ ಒಂದಾದ ಮೇಲೊಂದರಂತೆ ಗೆಲುವುನ್ನ ಕಂಡ ಸನ್ನಿ ಡಿಯೋಲ್ ಅವನ್ನ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮರೆತೆ ಹೋಗಿದ್ದರು.
ಬಾಲಿವುಡ್ನವರಿಗೆನೇ ಸನ್ನಿ ಡಿಯೋಲ್ ನೆನಪಿರಲಿಲ್ಲ. ಧಮೇಂದ್ರ ಮಗನಾದರೂ.. ಒಂದ್ಕಾಲದಲ್ಲಿ ಚಿನ್ನದ ಗಣಿ ತೆಗೆದಿದ್ದರೂ.. ಹಿಂದಿ ಚಿತ್ರರಂಗ ಸನ್ನಿ ಡಿಯೋಲ್ ಅವರನ್ನ ನಂಬಲಿಲ್ಲ. ಅವಕಾಶಗಳನ್ನ ಕೊಡಲಿಲ್ಲ. ಇದರಿಂದ ಹೈರಾಣಾದ ಸನ್ನಿ ಡಿಯೋಲ್ ಗೆ ಮಾಡಿಕೊಂಡ ಸಾಲ ಇನ್ನಷ್ಟು ಕಂಗಲಾಗಿಸಿತ್ತು. ಅಕ್ಷರಶಃ ಸನ್ನಿ ಡಿಯೋಲ್ ಅವರ ಬದುಕು ಕೇರ್ ಆಫ್ ಫುಟ್ಪಾತ್ ಎಂಬಂತಾಗಿತ್ತು.
ಇಂಥ ಸನ್ನಿ ಡಿಯೋಲ್ ಅವರನ್ನ ಕೈ ಹಿಡಿದು ಮೇಲೆತ್ತಿದ್ದು, ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಇವರಿಗೆ ಬೆಲೆ ಬರುವಂತೆ ಮಾಡಿದ್ದು ಮತ್ತದೇ ಗದರ್ ಸಿನಿಮಾ. 2000ನೇ ಇಸ್ವಿಯಲ್ಲಿ ಕೂಡ ಮುಳುಗುತ್ತಿದ್ದ ಸಮಯದಲ್ಲಿ ಗದರ್ ಚಿತ್ರದ ಮೂಲಕ ಎದ್ದು ನಿಂತಿದ್ದ ಸನ್ನಿ ಡಿಯೋಲ್ 2023ರಲ್ಲಿ ಮತ್ತೆ ಗದರ್ 2 ಚಿತ್ರದ ಮೂಲಕ ಮೈಕೊಡವಿ ಎದ್ದು ನಿಂತರು. ಸನ್ನಿ ಡಿಯೋಲ್ ಮುಖ ಚಹರೆ ಮರೆತ ಜನ ಗದರ್ 2 ಚಿತ್ರವನ್ನ ಮುಗಿ ಬಿದ್ದು ನೋಡಿದರು.
ಇದರಿಂದ ಇವತ್ತು ಸನ್ನಿ ಡಿಯೋಲ್ ಹೆಸರಿಗೆ ಮತ್ತೊಮ್ಮೆ ಚಿನ್ನದ ಬೆಲೆ ಬಂದಿದೆ. ಗದರ್ 2 ಕೂಡ ಗೆದ್ದ ಹಿನ್ನೆಲೆ ಇವರು ಅಭಿನಯಿಸಿದ್ದ ಹಿಂದಿನ ಸಿನಿಮಾಗಳ ಕಥೆಗಳಿಗೆ ಮರುಜೀವ ಕೂಡ ಸಿಕ್ಕಿದೆ. ಇದಕ್ಕೆ ಕೈಗನ್ನಡಿ ಎಂಬಂತೆ 27 ವರ್ಷದ ಹಿಂದೆ ತೆರೆಗೆ ಬಂದು, ಪ್ರತಿಯೊಬ್ಬರಲ್ಲಿಯೂ ದೇಶಾಭಿಮಾನವನ್ನು ಬಡಿದೆಬ್ಬಿಸಿದ್ದ ಬಾರ್ಡರ್ ಚಿತ್ರದ ಮುಂದುವರೆದ ಭಾಗವನ್ನ ಅಧಿಕೃತವಾಗಿ ಘೋಷಿಸಲಾಗಿದೆ.
ಮೊದಲ ಭಾಗದಲ್ಲಿ ಇದ್ದಂತೆ ಬಾರ್ಡರ್ 2ನಲ್ಲಿಯೂ ಸನ್ನಿ ಡಿಯೋಲ್ ಇಲ್ಲಿಯೂ ಕೇಂದ್ರ ಬಿಂದುವಾಗಿರಲಿದ್ದಾರೆ. ಇನ್ನೂ ಮೊದಲ ಭಾಗಕ್ಕೆ ನಿರ್ದೇಶನ ಮಾಡಿದ್ದ ಜೆಪಿ ದತ್ತಾ ಈ ಚಿತ್ರದಲ್ಲಿ ನಿರ್ಮಾಪಕರಾಗಿ ಮುಂದುವರೆಯಲಿದ್ದಾರೆ. ಅನುರಾಗ್ ಸಿಂಗ್ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ. ಉಳಿದಂತೆ ಸನ್ನಿ ಡಿಯೋಲ್ ಜೊತೆ ಈ ಬಾರಿಯೂ ಕೂಡ ಸುನಿಲ್ ಶೆಟ್ಟಿ, ಅಕ್ಷಯ್ ಖನ್ನಾ, ಜಾಕಿ ಶ್ರಾಫ್ ಇರ್ತಾರಾ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ.
ಸದ್ಯದಲ್ಲಿಯೇ ಪೂರ್ತಿ ಚಿತ್ರತಂಡದ ಹೆಸರನ್ನ ಜೆಪಿ ದತ್ತಾ ಘೋಷಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಬಾರ್ಡರ್ 2 ಚಿತ್ರದ ಸುದ್ದಿಯನ್ನ ಕೇಳಿ ಸಾಮಾಜಿಕ ಜಾಲತಾಣದಲ್ಲಿ ಅನೇಕರು ತಮ್ಮಗಾದ ಖುಷಿಯನ್ನ ಹಂಚಿಕೊಳ್ಳುತ್ತಿದ್ದಾರೆ. ಗೆಲ್ಲುವುದರಿಂದ ಈ ಚಿತ್ರವನ್ನ ತಡೆಯಲು ಯಾರಿಂದಲೂ ಸಾಧ್ಯ ಇಲ್ಲ ಎನ್ನುತ್ತಿದ್ದಾರೆ. ನಮ್ಮ ಬಾಲ್ಯದ ನೆನಪುಗಳನ್ನ ಮತ್ತೆ ತಾಜಾ ಮಾಡಲು ಮುಂದಾಗಿದ್ದಕ್ಕೆ ಧನ್ಯವಾದ ಎಂದು ಕೂಡ ಅನೇಕರು ಹೇಳುತ್ತಿದ್ದಾರೆ.