ಬೆಂಗಳೂರು: ಕಸ್ತೂರಿ ಕನ್ನಡ ಡಾ ರಾಜ್ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ತ್ರಿಶಕ್ತಿ ದೇವತೆಗಳಾದ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ, ಶ್ರೀ ಅನ್ನಪೂರ್ಣೆಶ್ವರಿ ದೇವಿ ಹಾಗೂ ಶ್ರೀ ಗಂಗಮ್ಮ ದೇವಿ ಅಮ್ಮನವರ ಉತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮೂರು ದಿನಗಳ ಕಾಲ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಕಸ್ತೂರಿ ಕನ್ನಡ ಡಾ.ರಾಜ್ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಹೆಬ್ಬಾಗಿಲ ರಸ್ತೆಯ ವೀರಭದ್ರಸ್ವಾಮಿ ಶಾಲೆಯ ಮುಂಭಾಗದಲ್ಲಿ ಹಾಕಿದ್ದ ವಿಶೇಷವಾದ ವೇದಿಕೆಯಲ್ಲಿ ತ್ರಿಶಕ್ತಿ ದೇವತೆಯರನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿ ಪ್ರಥಮ ದಿನದ ಕಾರ್ಯಕ್ರಮದಲ್ಲಿ ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದರಾಜುಸ್ವಾಮಿಗಳ ,
ದಿವ್ಯ ಸಾನಿಧ್ಯದಲ್ಲಿ ಸಂಜೆ ಲೋಕಕಲ್ಯಾಣಾರ್ಥವಾಗಿ ಬಡಾವಣೆಯ ಮತ್ತು ಅಕ್ಕ ಪಕ್ಕದ ಬಡಾವಣೆಯ ಸುಮಂಗಲಿಯರಿಂದ ಕುಂಕುಮಾರ್ಚನೆ ಸೇವಾ ಪೂಜೆ ನೆರವೇರಿತು ನಂತರ ತ್ರಿಶಕ್ತಿ ಮಾತೆಯರ ಉತ್ಸವದ ಮಂಟಪದ ಮುಂಭಾಗದಲ್ಲಿ ಶ್ರೀಮತಿ ಪ್ರತೀಭಾರವರು ವಿಶೇಷವಾದ ಬಣ್ಣದ ರಂಗೋಲಿ ಬಿಡಿಸಿ ನೆರೆದಿದ್ದ ಸಾವಿರಾರು ಭಕ್ತಾಧಿಗಳ ಗಮನಸೆಳೆದರು. ನಂತರ ನಡೆದ ವಿಶೇಷ ದೀಪೋತ್ಸವಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ದೀಪ ಬೆಳಗಿಸಿ ಚಾಲನೆ ನೀಡಿದರು.
ಎರಡನೇ ದಿನ ಬೆಳಿಗ್ಗೆ ರಾಜ್ಯೋತ್ಸವದ ಅಂಗವಾಗಿ ಕರುನಾಡ ತಾಯಿ ಭುವನೇಶ್ವರಿ ದೇವಿ ಮತ್ತು ವರನಟ ಡಾ. ರಾಜಕುಮಾರ್ ರವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ನಂತರ ಧ್ವಜಾರೋಹಣವನ್ನು ಮಾಜಿ ಬಿಬಿಎಂಪಿ ಸದಸ್ಯ ಉಮಾಶಂಕರ್, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್ ನೆರವೇರಿಸಿದರು. ಈ ವೇಳೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು ಸಂಜೆ ಮಾಜಿ ಸಚಿವ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪರವರ ಅಧ್ಯಕ್ಷತೆಯಲ್ಲಿ ನಾಡಿನ ಖ್ಯಾತ ಗಾಯಕರಾದ ವೆಚಿ ಆರುಣ್ ಕುಮಾರ್, ಹೊಸಳಯ್ಯ, ಗಾಯಕಿ ಗೀತಾ ಭತ್ತದ್, ಭಾಗ್ಯಲಕ್ಷ್ಮಿ ಮತ್ತಿತರರು ಭಾವಗೀತೆ, ಭಕ್ತಿಗೀತೆ ಹಾಗೂ ಜನಪದ ಗೀತೆಗಳನ್ನು ತಮ್ಮ ಶುಶ್ರಾವ್ಯ ಕಂಠದಿಂದ ಹಾಡಿ ನೆರೆದಿದ್ದ ನೂರಾರು ಜನರನ್ನು ರಂಜಿಸಿದರು.
ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಆಗಲಿದ ಸಂಘದ ಗೌರವಾಧ್ಯಕ್ಷ ನಾಗಣ್ಣ ಮತ್ತು ಸಂಘದ ಖಜಾಂಚಿಯಾಗಿದ್ದ ಬಿ. ದೇವರಾಜ್ ರವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ವಿಶೇಷ ಸಾಧಕರಿಗೆ ಕಸ್ತೂರಿ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಘದ ಖಜಾಂಚಿ ದಿವಂಗತ ಬಿ. ದೇವರಾಜ್ ಸುಪುತ್ರಿಯರಾದ ಕು. ಸ್ಫೂರ್ತಿ ಮತ್ತು ಕು. ನೇಹಾ ರವರು ಭರತನಾಟ್ಯ ಪ್ರದರ್ಶನ ನೀಡಿದರು. ಮಾಜಿ ಸಚಿವರು, ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಪ್ಪ ರವರಿಗೆ ಸಂಘದ ಅಧ್ಯಕ್ಷ ಗಂಗಾಧರ್, ಸಂಘದ ಪ್ರಧಾನ ಕಾರ್ಯದರ್ಶಿ ರ. ನರಸಿಂಹಮೂರ್ತಿ ಮತ್ತು ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಎಂ. ಲಿಂಗರಾಜು ಕಾರ್ಯಕ್ರಮದ ನಿರೂಪಣೆ ಮಾಡಿದರು.
ಮೂರನೇ ದಿನ ತ್ರಿಶಕ್ತಿ ಮಾತೆಯರಿಗೆ ವಿಶೇಷ ಪುಷ್ಪಾಅಲಂಕಾರದೊಂದಿಗೆ ಹೂವಿನ ಪಲ್ಲಕ್ಕಿಯಲ್ಲಿ ತ್ರಿಶಕ್ತಿ ಮಾತೆಯರಿಗೆ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಡೊಳ್ಳು ಕುಣಿತ, ಪೂಜಾ ಕುಣಿತ, ಪಟ ಕುಣಿತ ತಮಟೆ ಕಲಾವಿದರ ಕಲಾತಂಡಗಳೊಂದಿಗೆ ಹೂವಿನ ಪಲ್ಲಕ್ಕಿಯ ಮುಂಭಾಗ ಪ್ರದರ್ಶನವನ್ನು ನೀಡಿ ಬಳಿಕ ಕಂಠೀರವ ಕಾಲೋನಿ, ಅಗ್ರಹಾರ ದಾಸರಹಳ್ಳಿ ಹಾಗೂ ಕೈಗಾರಿಕನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ಗ್ರಾಮದ ಮನೆಗಳ ಮುಂದೆ ಕುಟುಂಬದ ಸದಸ್ಯರೊಂದಿಗೆ ತ್ರಿಶಕ್ತಿ ಮಾತೆಯರಿಗೆ ಪೂಜೆ ಸಲ್ಲಿಸಿದರು. ಒಟ್ಟಾರೆ ಮೂರು ದಿನಗಳ ಕಾಲ ಭಕ್ತಸಾಗರವೇ ಉತ್ಸವಕ್ಕೆ ಹರಿದುಬಂದಿತು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದರಾಜುಸ್ವಾಮಿಗಳು ಮಾತನಾಡಿ ವ್ಯಕ್ತಿಪೂಜೆ ಮಾಡುವುದರಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ ನಾವೆಲ್ಲರೂ ಒಂದೇ ಎನ್ನುವ ಭಾವನೆ ಅಗತ್ಯ. ಕೇವಲ ದೇವರ ಆರಾಧನೆ ಮಾತ್ರ ಮಾಡುವುದಲ್ಲ, ನಮ್ಮಲ್ಲಿರುವ ದುಷ್ಟ ಶಕ್ತಿ ದೂರಾಗಬೇಕು. ನಾವು ಬದಲಾಗಬೇಕು, ದೇಶದಲ್ಲಿ ಶಾಂತಿ ಸ್ಥಾಪನೆ ಆಗಬೇಕು. ನಮ್ಮ ಬದುಕು ಇತರರಿಗೆ ಮಾದರಿಯಾಗಬೇಕು ಎನ್ನುವ ನಿಟ್ಟಿನಲ್ಲಿ ನಾವೆಲ್ಲರೂ ಬದಲಾವಣೆಯತ್ತ ಸಾಗಬೇಕು.
ತ್ರಿಶಕ್ತಿ ಮಾತೆಯರ ಉತ್ಸವ ಅತ್ಯಂತ ವೈಭವವಾಗಿ ನಡೆಯುತ್ತಿರುವುದು ಈ ಭಾಗದ ಜನರಿಗೆ ಅತೀವ ಹೆಮ್ಮೆ ತರುವ ವಿಚಾರ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ, ಹೊಳಲ್ಕೆರೆ ಮಾಜಿ ಶಾಸಕ ಎ.ವಿ. ಉಮಾಪತಿ, ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವರ ವಿಶೇಷಧಿಕಾರಿಗಳಾದ ಡಾ. ಶಿವಮೂರ್ತಿ ಆರ್ ಕೆ, ಮಾಜಿ ಬಿಬಿಎಂಪಿ ಸದಸ್ಯೆ ರೂಪಾದೇವಿ ವಿಜಯಕುಮಾರ್, ಬಿ. ಮೋಹನ್ ಕುಮಾರ್,
ವಕೀಲರ ಸಂಘದ ಮಾಜಿ ಜಂಟಿ ಕಾರ್ಯದರ್ಶಿ ಕೆ ಎನ್ ಶಶಿಧರ್, ಸಮಾಜ ಸೇವಕರು ಕಾಂಗ್ರೆಸ್ ಮುಖಂಡರಾದ ಕೆ ವಿ ಸಂದೀಪ್, ಕೆಪಿಸಿಸಿ ಅಸಂಘಟಿತ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ಕೆಪಿಸಿಸಿ ಹಿಂದುಳಿದ ವರ್ಗ ವಿಭಾಗದ ಉಪಾಧ್ಯಕ್ಷ ವೇಣುಗೋಪಾಲ್ ಪರಿಸರ, ಪತ್ರಕರ್ತ ರಾಮಚಂದ್ರಣ್ಣ, ಗೋವಿಂದರಾಜನಗರ ಬ್ಲಾಕ್ ಉಪಾಧ್ಯಕ್ಷ ಡಿ ಸಿ ಯತೀಶ್, ವಾರ್ಡ್ ಅಧ್ಯಕ್ಷ ಹನುಮೇಗೌಡರು, ಕಾಂಗ್ರೆಸ್ ಮುಖಂಡರಾದ ಎಸ್ ಜಿ ಹರ್ಷ, ಕೆ. ಕಣ್ಣಯ್ಯ, ಚಿಕ್ಕಣ್ಣ, ಗುರುಶಂಕರ್, ನಂಜಪ್ಪ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ಪದಾಧಿಕಾರಿಗಳಾದ ಕಾರ್ಯದರ್ಶಿ ಮಹಮ್ಮದ್ ಅಸ್ಲಾಂ, ಉಪಾಧ್ಯಕ್ಷ ವಿಶ್ವನಾಥ್, ಸಹ ಕಾರ್ಯದರ್ಶಿಗಳಾದ ಮೋಹನ್ ಬಾಬು, ಹರೀಶ್.ವೈ, ಕಿರ್ಲೋಸ್ಕರ್ ಶ್ರೀನಿವಾಸ್, ಗಂಗಾಧರ್. ವೈ ಜಿ, ಚಂದ್ರ, ಶೇಖರ್, ಪ್ರಸಾದ್, ಶಿವಶಂಕರ್ ಸಂಚಾಲಕರಾದ ರವಿಕುಮಾರ್, ದೇವರಾಜ್, ಆಟೋ ನಾಗ, ಚಂದ್ರ, ರವಿ, ಸಂದೀಪ, ಹನುಮ, ಕಂಠೀರವ ಕಾಲೋನಿ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಹಾಜರಿದ್ದರು.