ಬೆಂಗಳೂರು: ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ನಾರಾಯಣ ಹೆಲ್ತ್ ಮತ್ತು ಬೆಂಗಳೂರು ಮೂಲದ ವೈಮಾನಿಕ ಲಾಜಿಸ್ಟಿಕ್ಸ್ ಕಂಪನಿ ಏರ್ ಬೌಂಡ್ ಸಂಸ್ಥೆಗಳು ಡ್ರೋನ್ ಮೂಲಕ ರೋಗನಿರ್ಣಯ ಮಾದರಿಗಳನ್ನು ಯಶಸ್ವಿಯಾಗಿ ಪ್ರಯೋಗಾಲಯಕ್ಕೆ ಕೊಂಡೊಯ್ಯುವ ತಮ್ಮ ಮಹತ್ವದ ಮೆಡಿಕಲ್ ಲಾಜಿಸ್ಟಿಕ್ಸ್ ಪೈಲಟ್ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಚಂದಾಪುರದಲ್ಲಿರುವ ನಾರಾಯಣ ಹೆಲ್ತ್ ಕ್ಲಿನಿಕ್ ನಿಂದ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಕೇಂದ್ರ ಪ್ರಯೋಗಾಲಯಕ್ಕೆ ವೈಮಾನಿಕ ಸಂಪರ್ಕ ಕಲ್ಪಿಸುವ ಮೂಲಕ, ನಗರ ಪ್ರದೇಶದ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಉಂಟುಮಾಡುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ.
ಜನವರಿ 2026ರಿಂದ ಈ ಯೋಜನೆ ಕೈಗೊಳ್ಳಲಾಗಿದ್ದು, ಈ 4 ಕಿ.ಮೀ ದೂರದ ವೈಮಾನಿಕ ಮಾರ್ಗವನ್ನು ಕೇವಲ 10 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆಯ ರಸ್ತೆ ಸಾರಿಗೆಗೆ ಹೋಲಿಸಿದರೆ ಅತ್ಯಂತ ವೇಗವಾಗಿ ತಲುಪಬಹುದು. ಪೈಲಟ್ ಯೋಜನೆಯ ಅವಧಿಯಲ್ಲಿ, ಸತತ 54 ಕಾರ್ಯಾಚರಣೆಯ ದಿನಗಳಲ್ಲಿ 700ಕ್ಕೂ ಹೆಚ್ಚು ಡ್ರೋನ್ ಹಾರಾಟಗಳನ್ನು ಮಾಡಲಾಗಿದ್ದು, ಪ್ರತಿ ಹಾರಾಟದಲ್ಲಿ 40 ರೋಗನಿರ್ಣಯ ಮಾದರಿಗಳನ್ನು ಸುರಕ್ಷಿತವಾಗಿ ಕೊಂಡೊಯ್ಯಲಾಗಿದೆ. ಈ ಯೋಜನೆಯು ಡ್ರೋನ್ ಆಧಾರಿತ ಸಾಗಾಣಿಕೆ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ತೋರಿಸಿಕೊಟ್ಟಿದೆ.
ಈ ಪೈಲಟ್ ಯೋಜನೆಗೆ ಮೊದಲು, ಚಂದಾಪುರ ಕ್ಲಿನಿಕ್ ನಿಂದ ರೋಗನಿರ್ಣಯದ ಮಾದರಿಗಳನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ರಸ್ತೆಯ ಮೂಲಕ ಕೇಂದ್ರ ಪ್ರಯೋಗಾಲಯಕ್ಕೆ ಸಾಗಿಸಲಾಗುತ್ತಿತ್ತು. ಸಂಚಾರ ದಟ್ಟಣೆಗೆ ಅನುಗುಣವಾಗಿ ಇವು ಪ್ರಯೋಗಾಲಯ ತಲುಪುವ ಸಮಯ ಹೆಚ್ಚಾಗುತ್ತಿತ್ತು. ಆದರೆ ಈಗ ಈ ವೈಮಾನಿಕ ಮಾರ್ಗದ ಬೇಡಿಕೆಗೆ ತಕ್ಕಂತೆ ಮತ್ತು ನಿಗದಿತ ವೇಳಾಪಟ್ಟಿಯಂತೆ ದಿನಕ್ಕೆ 20 ಹಾರಾಟಗಳನ್ನು ನಡೆಸುತ್ತಿದೆ. ಇದರಿಂದ ಪ್ರಯೋಗಾಲಯಗಳು ಮಾದರಿಗಳನ್ನು ಒಟ್ಟಾರೆಯಾಗಿ ಒಂದೇ ಸಲ ಪಡೆಯುವ ಬದಲಿಗೆ ನಿರಂತರವಾಗಿ ಸ್ವೀಕರಿಸಲು ಸಾಧ್ಯವಾಗುತ್ತಿದೆ. ಕಾರ್ಯಾಚರಣೆ ಆರಂಭವಾದ ಮೊದಲ ವಾರದಲ್ಲೇ, ನಾರಾಯಣ ಹೆಲ್ತ್ ರಸ್ತೆ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದು, ಈ ಎರಡು ಕೇಂದ್ರಗಳ ನಡುವೆ ವೈಮಾನಿಕ ಮಾರ್ಗವನ್ನೇ ಏಕೈಕ ಸಾರಿಗೆ ಸಂಪರ್ಕವನ್ನಾಗಿ ಮಾಡಿದೆ. ಇದು ಪ್ರಯೋಗಾಲಯದ ಕೆಲಸವನ್ನು ಬೇಗನೆ ಪ್ರಾರಂಭಿಸಲು ಅನುವು ಮಾಡಿಕೊಡುತ್ತಿದ್ದು, ವೈದ್ಯರು ವರದಿಗಳನ್ನು ವೇಗವಾಗಿ ಪಡೆಯಲು ಮತ್ತು ರೋಗಿಗಳಿಗೆ ರೋಗನಿರ್ಣಯದ ಫಲಿತಾಂಶ ಸಿಗುವ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿದೆ.
ಈ ಕುರಿತು ಮಾತನಾಡಿದ ನಾರಾಯಣ ಹೆಲ್ತ್ ನ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು, “ತಂತ್ರಜ್ಞಾನವು ವೈದ್ಯಕೀಯ ವೆಚ್ಚವನ್ನು ಕಡಿಮೆ ಮಾಡುವ ವೇಗವರ್ಧಕ ಎಂಬುದನ್ನು ನಂಬುತ್ತಾ, ನಾವು ನಮ್ಮ ವೈದ್ಯಕೀಯ ಡ್ರೋನ್ ವಿತರಣಾ ಸೇವೆಯ ಆರಂಭವನ್ನು ಹೆಮ್ಮೆಯಿಂದ ಘೋಷಿಸುತ್ತಿದ್ದೇವೆ. ತಾಂತ್ರಿಕ ವ್ಯವಸ್ಥೆಯ ಬಳಕೆಯ ಪರವಾಗಿರುವ ನಾವು, ಕಳೆದ 25 ವರ್ಷಗಳಲ್ಲಿ ಎಲ್ಲರಿಗೂ ಸುರಕ್ಷಿತ, ಕೈಗೆಟುಕುವ ಬೆಲೆಯ ಮತ್ತು ಸುಲಭವಾಗಿ ಲಭ್ಯವಿರುವ ವೈದ್ಯಕೀಯ ಸೇವೆಯನ್ನು ಒದಗಿಸಲು ಪ್ರಬಲವಾದ ಡಿಜಿಟಲ್ ವ್ಯವಸ್ಥೆಯನ್ನು ನಿರ್ಮಿಸಲು ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದೇವೆ. ಕ್ಲಿನಿಕಲ್ ಪ್ರಯೋಗಾಲಯಗಳು ಮತ್ತು ರಕ್ತನಿಧಿಗಳಂತಹ ಅತ್ಯಗತ್ಯ ಸೇವೆಗಳನ್ನು ಕೇಂದ್ರೀಕೃತಗೊಳಿಸುವ ಮೂಲಕ ಕಾರ್ಯಕ್ಷಮತೆಯನ್ನು ಉತ್ಕೃಷ್ಟಗೊಳಿಸಿರುವುದರಿಂದ ರೋಗನಿರ್ಣಯ ಮತ್ತು ರಕ್ತ ವರ್ಗಾವಣೆಯ ವೆಚ್ಚವನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ. ಆದಾಗ್ಯೂ, ಸಾಗಾಣಿಕೆ ಸಮಯ ಮತ್ತು ಸಾಗಾಣಿಕೆ ವೆಚ್ಚಗಳು ಈ ಬದಲಾವಣೆನೆಗೆ ಬಹುದೊಡ್ಡ ಅಡ್ಡಿಯಾಗಿದ್ದವು” ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, “ಡ್ರೋನ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಏರ್ ಬೌಂಡ್ ಸಂಸ್ಥೆ ಜೊತೆ ಪಾಲುದಾರಿಕೆ ಹೊಂದುವ ಮೂಲಕ, ನಾವು ಈ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತಿದ್ದೇವೆ. ಚಂದಾಪುರದಲ್ಲಿರುವ ನಮ್ಮ ಕ್ಲಿನಿಕ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಮ್ಮ ಆಸ್ಪತ್ರೆಯನ್ನು ಸಂಪರ್ಕಿಸುವ ಯಶಸ್ವಿ ಪ್ರಾಯೋಗಿಕ ಯೋಜನೆಯ ನಂತರ, ಅತಿ ವೇಗದ ಮತ್ತು ಕಡಿಮೆ ವೆಚ್ಚದ ವೈಮಾನಿಕ ಲಾಜಿಸ್ಟಿಕ್ಸ್ ಸೇವೆ ಒದಗಿಸಬಲ್ಲ ‘ಅದ್ಭುತ ಫಲಿತಾಂಶಗಳನ್ನು’ ನಾವು ಪ್ರತ್ಯಕ್ಷವಾಗಿ ನೋಡಿದ್ದೇವೆ” ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮೆಡಿಕಲ್ ಲಾಜಿಸ್ಟಿಕ್ಸ್ ಕಾರಿಡಾರ್ ಯೋಜನೆ ರೂಪಿಸಲು 700ಕ್ಕೂ ಹೆಚ್ಚು ಯಶಸ್ವಿ ಡ್ರೋನ್ ಹಾರಾಟ ನಡೆಸಿದ ಏರ್ ಬೌಂಡ್ ಮತ್ತು ನಾರಾಯಣ ಹೆಲ್ತ್



