ಬೆಂಗಳೂರು: “ಕೇವಲ ಅಕ್ಷರ ಕಲಿತವನು ಪರಿಪೂರ್ಣ ಮಾನವನಾಗುವುದಿಲ್ಲ. ಅಕ್ಷರದ ಜೊತೆಗೆ ಸಂಸ್ಕಾರ ಇದ್ದಾಗ ಮಾತ್ರ ನಮ್ಮ ವ್ಯಕ್ತಿತ್ವ ಪರಿಪೂರ್ಣವಾಗುವುದು” ಎಂದು ಲೇಖಕ ಹಾಗೂ ಅಂಕಣಕಾರ ಮಣ್ಣೆ ಮೋಹನ್ ತಿಳಿಸಿದರು.
ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಕಂಟ್ರಿಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ವಿದ್ಯಾಂಜಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ 24ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಮುಂದುವರೆದ ಮಾತನಾಡಿದ ಅವರು “ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಹಾಗೂ ಶಿಕ್ಷಕರ ಪಾತ್ರ ಮಹತ್ವಪೂರ್ಣವಾದದ್ದು.
ಮುಂದಿನ ದಿನಗಳಲ್ಲಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ” ಎಂದರು. ಶಾಲಾ ಕಾರ್ಯದರ್ಶಿಗಳಾದ ಉಮಾಶಂಕರ್ ಈ ರವರು ಮಾತನಾಡಿ “ಧರ್ಮ ಧರ್ಮಗಳ ನಡುವೆ ನಡೆಯುತ್ತಿರುವ ಸಂಘರ್ಷದ ಸಂದರ್ಭದಲ್ಲಿ
ಎಲ್ಲರೂ ಮಾನವ ಧರ್ಮವನ್ನು ಪಾಲಿಸುತ್ತ ಮಾನವೀಯತೆಯಿಂದ ಬಾಳಬೇಕು” ಎಂದು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯನಿಯ ವರಾದ ಹೇಮಲತಾ ಎ, ನಿರ್ದೇಶಕರಾದ ಶಮಂತ್ ಆರ್. ಲೇಖಕರು ಹಾಗೂ ಪತ್ರಕರ್ತರಾದ ಮಣ್ಣೆ ಮೋಹನ್, ಕಾವೇರಿ ವಿದ್ಯಾ ಸಂಸ್ಥೆಯ ಗಿರೀಶ್, ಬ್ಲೂಬೆಲ್ ಶಾಲೆಯ ಕೇಶವ ಮೂರ್ತಿ, ಸಾಯಿ ಶಾಲೆಯ ಕೃಷ್ಣ ರವರು ಪಾಲ್ಗೊಂಡಿದ್ದರು.
ಅಂತರ ಶಾಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು, ಈ ಸಂಧರ್ಭದಲ್ಲಿ ಶೇಕಡ 100 ರಷ್ಟು ಹಾಜರಾತಿ ಹಾಗೂ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಿರುವ ಪೋಷಕರಿಗೆ ವೇದಿಕೆಯಲ್ಲಿ ಗಣ್ಯರು ಸನ್ಮಾನಿಸಿದರು,ಶಾಲಾ ಪುಟಾಣಿಗಳು ಮನಮೋಹಕವಾದ ಮನರಂಜನ ಕಾರ್ಯಕ್ರಮಗಳನ್ನು ನೀಡಿದರು.
ಆಧುನಿಕ ಕಾಲಘಟ್ಟದಲ್ಲಿ ಶಿಥಿಲವಾಗುತ್ತಿರುವ ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧದ ಕುರಿತಾದ ‘ಅಮ್ಮ’ ಎಂಬ ದೃಶ್ಯರೂಪಕ ನೋಡುಗರ ಕಣ್ಣಲ್ಲಿ ನೀರನ್ನು ತರಿಸಿತು. ಪ್ರೀ ಕೆಜಿ, ಎಲ್ ಕೆ ಜಿ, ಯು ಕೆ ಜಿ ಮಕ್ಕಳ ನೃತ್ಯ ಮತ್ತು ಶ್ಲೋಕ ಪಠಣಗಳು ಎಲ್ಲರ ಮನೆಗೆದ್ದವು. ಅನುಶ್ರೀ ರವರು ಕಾರ್ಯಕ್ರಮವನ್ನು ನಿರೂಪಿಸಿದರು.