ದೊಡ್ಡಬಳ್ಳಾಪುರ: ಇಲ್ಲಿನ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಪ್ರೌಢಶಾಲೆಯಲ್ಲಿ ಭಾರತದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರಮಾತೆ ಸಾವಿತ್ರಿ ಬಾಪುಲೆ ಅವರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಪಾಲ್ಗೊಂಡ ಬೆಂ.ಗ್ರಾ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ .ಕೆ.ಆರ್.ರವಿಕಿರಣ್ ಮಾತನಾಡಿ,ಕಂದಾಚಾರಗಳ ಕಪಿಮುಷ್ಠಿಯಲ್ಲಿ ಅಕ್ಷರ ವಂಚಿತ
ರಾಗಿದ್ದ ತಳಸಮುದಾಯಗಳು ಹಾಗೂ ಹೆಣ್ಣು ಮಕ್ಕಳಿಗೆ ಅಕ್ಷರ ಅರಿವನ್ನು ಬಿತ್ತುವ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ಹೆಗ್ಗಳಿಕೆ ಸಾವಿತ್ರಿ ಬಾ ಪುಲೆ ಅವರದ್ದು.
ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ, ಅಪಮಾನಗಳನ್ನು ಎದುರಿಸಿ ಸಾಮಾಜಿಕ ಬದಲಾವಣೆಗಾಗಿ ಶ್ರಮಿಸಿದ ಅಕ್ಷರದವ್ವನ ನೆನಪು ಅನನ್ಯವಾದ್ದು ಎಂದು ತಿಳಿಸಿದರು.ಇಂದಿಗೂ ಸಾಮಾಜಿಕವಾಗಿ ಹಲವು ಬಗೆಯ ತಾರತಮ್ಯ ಮತ್ತು ವಂಚನೆಗಳು ನಿರಂತರ
ವಾಗಿವೆ. ಇಡೀ ಸ್ತ್ರೀ ಸಂಕುಲವನ್ನು ಅಕ್ಷರಜ್ಞಾನದಿಂದ ವಂಚಿಸಿದ್ದ ಹುನ್ನಾರದ ಕುರಿತು ಆತ್ಮಾವ ಲೋಕನ ಅಗತ್ಯ. ಅಭಿವೃದ್ದಿಯ ಪರಿಕಲ್ಪನೆ ಇಂದು ಲಿಂಗಾಧಾರಿತ ಅಂಶಗಳನ್ನೂ ಒಳಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಜಿಯಾಉಲ್ಲಾ ಖಾನ್ ಮಾತನಾಡಿ, ಮಕ್ಕಳಿಗೆ ನಮ್ಮ ನಿಜ ಪರಂಪರೆಯನ್ನು ತಿಳಿಸಿಕೊಡುವುದು ಶಿಕ್ಷಣದ ಧ್ಯೇಯವಾಗಬೇಕು. ದೇಶದ ಅಸಂಖ್ಯಾತ ಹೆಣ್ಣು ಮಕ್ಕಳು ಇಂದು ಅಕ್ಷರ ಜ್ಞಾನ ಪಡೆದಿದ್ದಾರೆ ಎಂದರೆ ಅದಕ್ಕೆ ಸಾವಿತ್ರಿ ಬಾಪುಲೆ ಅಂತಹವರ ಕೊಡುಗೆ ಅಪಾರ ಎಂದರು.
ಹಲವು ವಿದ್ಯಾರ್ಥಿಗಳು ಸಾವಿತ್ರಿ ಬಾಪುಲೆ ಅವರ ಜೀವನ ಸಾಧನೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಬಿ.ವಿಜಯ ಕುಮಾರ್, ಮೊಹಮ್ಮದ್ ಕೈಸರ್ ಪಾಷಾ, ದೇವರಾಜು, ಅಜ್ಮತ್ ಉನ್ನಿಸ, ನಿರ್ಮಲ, ವಜಿಹಾ ಸುಲ್ತಾನ, ಶಾರದಾ ಮತ್ತಿತರರು ಉಪಸ್ಥಿತರಿದ್ದರು.