ಬಹುಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಕಣ್ಣಪ್ಪ; ದಿ ಗ್ರೇಟ್ ಎಪಿಕ್ ಇಂಡಿಯನ್ ಟೇಲ್ ಸಿನಿಮಾ ಘೋಷಣೆ ಆದಾಗಿನಿಂದ ಒಂದಲ್ಲ ಒಂದು ರೀತಿ ಸದ್ದು ಮಾಡುತ್ತಲೇ ಇದೆ. ವಿಷ್ಣು ಮಂಚು ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಬಹುತಾರಾಗಣವೂ ಚಿತ್ರದ ಹೈಲೈಟ್. ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ?ಕಣ್ಣಪ್ಪ? ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಕುತೂಹಲ ಮೂಡಿಸಿತ್ತು. ಈಗ ಇದೇ ಬಳಗಕ್ಕೆ ಬಾಲಿವುಡ್ನ ಸ್ಟಾರ್ ನಟ ಅಕ್ಷಯ್ ಕುಮಾರ್ ಸೇರ್ಪಡೆಯಾಗಿದ್ದಾರೆ.
ಹೌದು ಕಣ್ಣಪ್ಪ ಸಿನಿಮಾ ತಂಡದಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಪ್ಪ ಸಿನಿಮಾಕ್ಕೆ ಇದೀಗ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಅಂದರೆ ಕಣ್ಣಪ್ಪ ಚಿತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್ ಪ್ರವೇಶಿಸಲಿದ್ದಾರೆ ಅಕ್ಷಯ್ ಕುಮಾರ್. ಸದ್ದಿಲ್ಲದೆ ಈ ಸಿನಿಮಾದ ಶೂಟಿಂಗ್ನಲ್ಲೂ ಅಕ್ಷಯ್ ಕುಮಾರ್ ಭಾಗವಹಿಸಿದ್ದಾರೆ.
ಬಾಲಿವುಡ್ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ಅಕ್ಷಯ್ ಕುಮಾರ್ ಅವರ ಬಡೇ ಮಿಯಾ ಚೋಟೆ ಮಿಯಾ ಸಿನಿಮಾ ಕಳೆದ ವಾರವಷ್ಟೇ ರಿಲೀಸ್ ಆಗಿತ್ತು. ಈಗ ಅದರ ಸಕ್ಸಸ್ ಖುಷಿಯ ನಡುವೆಯೇ, ಕಣ್ಣಪ್ಪ ಸಿನಿಮಾದ ಶೂಟಿಂಗ್ನಲ್ಲಿ ಭಾಗವಹಿಸಿದ್ದಾರೆ. ಮೈನವಿರೇಳಿಸುವ ಸಾಹಸ ದೃಶ್ಯಗಳಲ್ಲಿ ಬರೀ ಅಕ್ಷಯ್ ಕುಮಾರ್ ಮಾತ್ರವಲ್ಲ ವಿಷ್ಣು ಮಂಚು ಸಹ ಕ್ಲೈಮ್ಯಾಕ್ಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೈದರಾಬಾದ್ನಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದ್ದು, ಚಿತ್ರೀಕರಣವೂ ನಡೆಯುತ್ತಿದೆ.
ಈ ಬಗ್ಗೆ ಖುಷಿ ಹಂಚಿಕೊಳ್ಳುವ ನಾಯಕ ವಿಷ್ಣು ಮಂಚು, “ಅಕ್ಷಯ್ ಅವರ ಜೊತೆ ಶೂಟಿಂಗ್ ಮಾಡುತ್ತಿರುವುದು ಥ್ರಿಲ್ಲಿಂಗ್ ಆಗಿದೆ. ನಾವು ಒಟ್ಟಿಗೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದೇವೆ. ಅಕ್ಷಯ್ ಕುಮಾರ್ ಅವರ ಜತೆಗೆ ಸಾಹಸ ದೃಶ್ಯಗಳ ಚಿತ್ರೀಕರಣವೇ ರೋಚಕ. ನಮ್ಮ ತಂಡಕ್ಕೆ ಅಕ್ಷಯ್ ಕುಮಾರ್ ಸೇರ್ಪಡೆಯಾಗುತ್ತಿದ್ದಂತೆ, ಕಣ್ಣಪ್ಪ ಸಿನಿಮಾ ಇದೀಗ ನಿಜವಾದ ಪ್ಯಾನ್ ಇಂಡಿಯಾ ಚಿತ್ರವಾಗಿ ಹೊರಹೊಮ್ಮಲಿದೆ” ಎಂದಿದ್ದಾರೆ.
ಮುಖೇಶ್ ಕುಮಾರ್ ಸಿಂಗ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಮೂಡಿಸಿದೆ. ತಾರಾಗಣದ ವಿಚಾರವಾಗಿಯೂ ಈ ಸಿನಿಮಾ ಸದ್ದು ಮಾಡುತ್ತಿದೆ. ಸದ್ಯ ಟಾಲಿವುಡ್ನ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಮೋಹನ್ ಲಾಲ್ ಮತ್ತು ಸ್ಯಾಂಡಲ್ವುಡ್ನ ಶಿವರಾಜಕುಮಾರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜತೆಗೆ ಮೋಹನ್ ಬಾಬು, ಶರತ್ ಕುಮಾರ್, ಬ್ರಹ್ಮಾನಂದಂ ಸಹ ಈ ಸಿನಿಮಾದಲ್ಲಿರಲಿದ್ದಾರೆ. ಹಾಲಿವುಡ್ ಛಾಯಾಗ್ರಾಹಕ ಶೆಲ್ಡನ್ ಚೌ, ಸಾಹಸ ನಿರ್ದೇಶಕ ಕೆಚ ಖಂಫಕ್ಡೀ ಮತ್ತು ನೃತ್ಯ ಮಾಂತ್ರಿಕ ಪ್ರಭುದೇವ ಸಹ ತಾಂತ್ರಿಕ ಬಳಗದಲ್ಲಿದ್ದಾರೆ.