ಅಕಪುಲ್ಕೊ (ಮೆಕ್ಸಿಕೊ): ಆಸ್ಟ್ರೇಲಿಯದ ತೃತೀಯ ಶ್ರೇಯಾಂಕಿತ ಆಟಗಾರ ಅಲೆಕ್ಸ್ ಡಿ ಮಿನೌರ್ `ಮೆಕ್ಸಿಕನ್ ಓಪನ್ ಟೆನಿಸ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್ನಲ್ಲಿ ಡಿ ಮಿನೌರ್ 6-4, 6-4 ನೇರ ಸೆಟ್ಗಳಿಂದ ನಾರ್ವೆಯ ಕ್ಯಾಸ್ಪರ್ ರೂಡ್ ಅವರನ್ನು ಮಣಿಸಿದರು.
ಕಳೆದ ವಾರ ಮುಗಿದ ರೋಟರ್ಡ್ಯಾಮ್ ಟೆನಿಸ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜಾನಿಕ್ ಸಿನ್ನರ್ಗೆ ಶರಣಾಗಿದ್ದ ಡಿ ಮಿನೌರ್ ಪ್ರಶಸ್ತಿ ವಂಚಿತರಾಗಿದ್ದರು. ಆದರೆ ಮೆಕ್ಸಿಕೊ ಓಪನ್ ಸವಾಲನ್ನು ಮೆಟ್ಟಿ ನಿಂತರು.ನನ್ನ ಪಾಲಿಗೆ ಇದೊಂದು ಅಮೋಘ ವಾರವಾಗಿತ್ತು. ಅಕಪೊಲ್ಕೊ ನನ್ನ ಪಾಲಿನ ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಮೊದಲ ಸಲ ಎಟಿಪಿ 500 ಪ್ರಶಸ್ತಿ ಜಯಿಸಿದ್ದು, ಮೊದಲ ಸಲ ಪ್ರಶಸ್ತಿ ಉಳಿಸಿಕೊಂಡದ್ದು ಇದೇ ಅಂಗಳದಲ್ಲಿ ಎಂಬುದಾಗಿ ಅಲೆಕ್ಸ್ ಡಿ ಮಿನೌರ್ ಹೇಳಿದರು.ಕಳೆದ ವರ್ಷದ ಫೈನಲ್ನಲ್ಲಿ ಅಲೆಕ್ಸ್ ಡಿ ಮಿನೌರ್ ಅಮೆರಿಕದ ಟಾಮಿ ಪೌಲ್ ವಿರುದ್ಧ 3 ಸೆಟ್ಗಳ ಜಯ ಸಾಧಿಸಿದ್ದರು.