ಬೆಂಗಳೂರು: ರಾಜ್ಯದಲ್ಲಿ ನವೆಂಬರ್ ಕ್ರಾಂತಿಯ ವಿಚಾರ ಮುನ್ನೆಲೆಗೆ ಬಂದಿದ್ದು, ಈಗ ಎಲ್ಲರ ಕಣ್ಣು ಕ್ಲೋಸ್ ಡೋರ್ ಮೀಟಿಂಗ್ ಮೇಲೆ ಬಿದ್ದಿದೆ. ಸದ್ಯದಲ್ಲೇ ಕಾಂಗ್ರೆಸ್ ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಕ್ಲೋಸ್ ಡೋರ್ ಮೀಟಿಂಗ್ ನಡೆಯಲಿದ್ದು, ದೆಹಲಿಯ ಅಂಗಳದಲ್ಲಿ ಇದಕ್ಕೆ ವೇದಿಕೆ ಸಿದ್ಧವಾಗಿದೆ. ನವೆಂಬರ್ ೧೫ ರಂದು ದೆಹಲಿಯಲ್ಲಿ ಕ್ಲೋಸ್ ಡೋರ್ ಮೀಟಿಂಗ್ಗೆ ದಿನಾಂಕ ನಿಗದಿಯಾಗಿದ್ದು, ಆ ಮೀಟಿಂಗ್ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ.
೬ ಮಂದಿ ಪ್ರಮುಖವಾಗಿ ಮೀಟಿಂಗ್ನಲ್ಲಿ ಭಾಗಿಯಾಗಲಿದ್ದು, ಇದರಲ್ಲಿ ರಾಜ್ಯದ ನಾಯಕತ್ವ ಬದಲಾವಣೆ ಕುರಿತಂತೆ ಚರ್ಚೆ ನಡೆಯಲಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಬೇಕೆಂದು ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದು, ಸಿದ್ಧರಾಮಯ್ಯ ನಾಯಕತ್ವ ಬದಲಾವಣೆಗೆ ಒಪ್ಪದೇ ಹೋದರೆ, ಕ್ಲೋಸ್ ಡೋರ್ ಮೀಟಿಂಗ್ನಲ್ಲಿ ಏನೇನು ನಡೆಯಲಿದೆ? ಎಂಬುದು ಕುತೂಹಲ ಕೆರಳಿಸಿದೆ.
ಇನ್ನು ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ದೊಡ್ಡ ಪ್ರಮಾಣದಲ್ಲಿ ಚರ್ಚೆಗೆ ಬಂದಿದ್ದು, ಈಗಿರುವ ರಾಜಕಾರಣದ ಸಮೀಕರಣ ಕಾಂಗ್ರೆಸ್ಗೆ ಪೂರಕವಾಗಿದೆ. ಈಗ ಸಚಿವ ಸಂಪುಟ ಪುನಾರಚನೆ ಮಾಡುವುದು ಮಾತ್ರ ಸೂಕ್ತ. ನಾಯಕತ್ವ ಬದಲಾವಣೆ ಮಾಡಲು ಮುಂದಾಗಿದ್ದೇ ಆದ್ರೆ, ತೀವ್ರ ಗೊಂದಲಗಳು ಉಂಟಾಗಲಿದೆ ಎಂದು ಸಿದ್ಧರಾಮಯ್ಯ ವಾದಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ನನ್ನ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದ್ದೇನೆ. ನಾನು ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮ ಹಾಕಿದ್ದೇನೆ ಎಂದು ಡಿಸಿಎಂ, ಕೆಪಿಸಿಸಿ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾದಿಸಲಿದ್ದು, ಕ್ಲೋಸ್ ಡೋರ್ ಮೀಟಿಂಗ್ನಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ಗಾಂಧಿ, ರಣ್ದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆ. ಸಿ.ವೇಣುಗೋಪಾಲ್ ಏನೇನು ತಿಳಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.ಇನ್ನು ನವೆಂಬರ್ ೧೫ ರಂದು ದೆಹಲಿಯಲ್ಲಿ ನಡೆಯಲಿರುವ ಈ ಸಭೆಯತ್ತ ಎಲ್ಲರ ಗಮನ ನೆಟ್ಟಿದೆ ಎನ್ನಲಾಗಿದೆ.



