ಬೆಂಗಳೂರು: ಆಭರಣ ಟೈಮ್ ಲೆಸ್ಜ್ಯುವೆಲ್ಲರಿ ಪ್ರಾಯೋಜಿತ ಅಖಿಲ ಭಾರತ ಜಿಎಸ್ ಬಿ ಚೆಸ್ ಟೂರ್ನಮೆಂಟ್ ಬೆಂಗಳೂರಿನ ಖಾಸಗಿ ಹೋಟೇಲಿನಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು.
ಕೊಡಿಯಾಲ್ ಸ್ಪೋರ್ಟ್ ಅಸೋಸಿಯೇಷನ್, ಕಿಂಗ್ಸ್ ಚೆಸ್ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಶನ್ ಜಂಟಿಯಾಗಿ ಆಯೋಜಿಸಿದ ಚೆಸ್ ಸ್ಪರ್ಧಾಕೂಟದಲ್ಲಿ 6 ರಿಂದ 67 ವರ್ಷ ವಯೋಮಾನದ ಚೆಸ್ ಆಟಗಾರರು ಭಾಗವಹಿಸಿದರು.
ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ ಸಹಿತ ದೇಶದ ವಿವಿಧ ಭಾಗಗಳಿಂದ ಒಟ್ಟು 120 ಸ್ಪರ್ಧಾಳುಗಳು ಪಾಲ್ಗೊಂಡರು. ಫೀಡೆ ಫ್ಲೇಯರ್ ರೇಟಿಂಗ್ ಹೊಂದಿರುವ 16 ಆಟಗಾರರು ಸೇರಿ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ 26 ಆಟಗಾರರು ಭಾಗವಹಿಸಿ ತಮ್ಮ ನೈಪುಣ್ಯತೆಯನ್ನು ಮೆರೆದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಆಭರಣ್ ಟೈಮ್ ಲೆಸ್ ಜ್ಯುವೆಲ್ಲರಿ ಎಂಡಿ ಡಾ. ಪ್ರತಾಪ್ ಕಾಮತ್ ಇಂತಹ ಸ್ಪರ್ಧಾಕೂಟದ ಪ್ರಾಯೋಜಕತ್ವ ವಹಿಸಿರುವುದು ನಮ್ಮ ಸಂಸ್ಥೆಗೆ ಖುಷಿಯ ವಿಷಯ. ಚೆಸ್ ಆಟಕ್ಕೆ ಆಟಗಾರರಿಂದ ಇಷ್ಟು ದೊಡ್ಡ ಸ್ಪಂದನೆ ಸಿಕ್ಕಿರುವುದು ಸಂತಸ ತಂದಿದೆ.
ಏಳು ವರ್ಷದ ಕೆಳಗಿನ ಕ್ಯಾಟಗರಿಯಿಂದ ಹಿಡಿದು ಹಿರಿಯರ ತನಕ ಬೇರೆ ಬೇರೆ ವಯೋಮಾನದವರು ಭಾಗವಹಿಸಿ ಕ್ರೀಡಾ ಸ್ಫೂರ್ತಿಯನ್ನು ಮೆರೆದಿರುವುದು ಉತ್ತಮ ಸಂಗತಿ. ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ನಡೆಸುವ ಯಾವುದೇ ಕ್ರೀಡಾಕೂಟ ಬಹಳ ಶಿಸ್ತುಬದ್ಧವಾಗಿ ನಡೆಯುತ್ತದೆ. ಕಾರ್ಯಕ್ರಮ ಉತ್ತಮವಾಗಿ ಮೂಡಿಬರಲು ಶ್ರಮಿಸಿದ ಸರ್ವರಿಗೂ ಅಭಿನಂದನೆಗಳು. ನಮ್ಮ ಸಂಸ್ಥೆಯ ಸಹಕಾರ ಎಂದಿನಂತೆ ಯಾವತ್ತೂ ಇರಲಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ, ರಾಜ್ಯ ಮಾಧ್ಯಮ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಮಾಧ್ಯಮಗಳಲ್ಲಿ ಕ್ರಿಕೆಟ್ ಆಟಕ್ಕೆ ಸಿಕ್ಕಿದಷ್ಟು ಪ್ರಾಶಸ್ತ್ಯ ಬೇರೆ ಆಟಕ್ಕೆ ಸಿಗುವುದಿಲ್ಲ ಎನ್ನುವ ಆಪಾದನೆಯ ಹೊರತಾಗಿಯೂ ಚೆಸ್ ನಂತಹ ಆಟಗಳಿಗೆ ಇಂತಹ ಪ್ರೋತ್ಸಾಹ ಸಿಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಉದ್ಯಮಿ ನಾರಾಯಣ ಪೈ ಶುಭ ಹಾರೈಸಿದರು. ಸಿಎ ಜಗನ್ನಾಥ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಂಗಲ್ಪಾಡಿ ನರೇಶ್ ಶೆಣೈ, ದೀಪಾ ಕಾಮತ್, ಚೇತನ್ ಕಾಮತ್, ಪ್ರವೀಣ್ ಕಾಮತ್, ಸಿದ್ಧಾರ್ಥ್ ಪ್ರಭು ಹಾಗೂ ಗಣ್ಯರು ಉಪಸ್ಥಿತರಿದ್ದರು. ನಾಗೇಂದ್ರ ಶೆಣೈ ನಿರೂಪಿಸಿದರು.