ಬೆಂಗಳೂರು: ಇದೇ ಜನವರಿ 26 ರಂದು ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿರುವ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಭರದ ಸಿದ್ಧತೆ ನಡೆದಿದೆ. ಜನವರಿ 26ರ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಲಿದ್ದಾರೆ.
ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೇರಳ ಪೊಲೀಸ್ ಪಡೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಸಿಸಿ, ಸೇವಾದಳ, ವಿವಿಧ ಶಾಲಾ ತಂಡಗಳು ಸೇರಿದಂತೆ 38 ತುಕಡಿಗಳಲ್ಲಿ ಒಟ್ಟು 1,150 ಜನರು ಭಾಗಿಯಾಗಲಿದ್ದಾರೆ.
ಇಂದು ನಡೆದಿರುವ ಸಿದ್ಧತೆಗಳನ್ನು ಪರಿಶೀಲಿಸಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮತ್ತು ಜಿಲ್ಲಾಧಿಕಾರಿ ಕೆ.ಎ ದಯಾನಂದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಲಾ ಮಕ್ಕಳ ಬ್ಯಾಂಡ್, ಪಥಸಂಚಲನ ಸೇರಿದಂತೆ 1,500 ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ. ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಎಲ್ಲ ವ್ಯವಸ್ಥೆ ಮಾಡಲಾಗಿದೆ.
ಪ್ರವೇಶಕ್ಕಾಗಿ ಈ ಬಾರಿ ಐದು ಗೇಟ್ ನಿರ್ಮಿಸಲಾಗಿದೆ. ಜಿ4 ಗೇಟ್ನಲ್ಲಿ ಅತಿಗಣ್ಯ, ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳಿಗೆ ಪ್ರವೇಶ ಜಿ5 ಗೇಟ್ನಲ್ಲಿಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ವಿವರ ನೀಡಿದ್ದಾರೆ.
ಕಳೆದ 15 ದಿನಗಳಿಂದ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ನಿಗಾ ಇಡಲಾಗಿದೆ. 9 ಡಿಸಿಪಿ, 16 ಎಸಿಪಿ, 46 ಇನ್ಸ್ಪೆಕ್ಟರ್ಗಳು ಸೇರಿದಂತೆ 575 ಅಧಿಕಾರಿಗಳು, 1000 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜೊತೆಗೆ ಆರ್ಮಡ್ ಫೋರ್ಸ್, ಶ್ವಾನದಳ ಇರಲಿದೆ. ಬ್ಯಾಗೇಜ್ ಸ್ಕ್ಯಾನರ್ ಮತ್ತು 100 ಸಿಸಿಟಿವಿಗಳನ್ನ ಅಳವಡಿಸಲಾಗಿದೆ. ವಾಹನ ಸಂಚಾರದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಬರುವವರು ಬೆಳಿಗ್ಗೆ 8.30ರೊಳಗೆ ಮೈದಾನದೊಳಗೆ ಹಾಜರಿರಬೇಕು. ಪ್ರವೇಶಕ್ಕೆ ಯಾವ ಯಾವ ಗೇಟ್ ನಿಗದಿಯಾಗಿದೆ ಅಲ್ಲಿಂದಲ್ಲೇ ಬರಬೇಕು. ಸಿಗರೇಟ್, ಚಾಕು, ಕಪ್ಪು ಕರವಸ್ತ್ರ, ಪಟಾಕಿ ಸೇರಿ ಹಲವು ವಸ್ತುಗಳಿಗೆ ನಿಷೇಧವಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರವಹಿಸಿದ್ದೇವೆ ಎಂದರು.