ಮುನಿರಾಜು
ವಿಜಯಪುರ: ಪಟ್ಟಣದ ಜನತೆಯ ಆರೋಗ್ಯವನ್ನು ನಿರಂತರವಾಗಿ ಕಾಪಾಡುತ್ತಿರುವ, ಪೌರಕಾರ್ಮಿಕರೂ ಸಹಾ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಹೇಳಿದರು.
ಪಟ್ಟಣದ ರೋಜ್ ಗಾರ್ ಕಚೇರಿಯ ಆವರಣದಲ್ಲಿ ಪೌರಕಾರ್ಮಿಕರಿಗಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಪೌರಕಾರ್ಮಿಕರು, ನಿಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು. ನೀವು ಆರೋಗ್ಯವಾಗಿದ್ದರೆ, ಪಟ್ಟಣದ ಜನತೆಯು ಸುರಕ್ಷಿತವಾಗಿರುತ್ತಾರೆ. ಸರಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳುವುದರ ಜೊತೆಗೆ, ಪುರಸಭೆಯಿಂದ ಕೊಡುವಂತಹ ಸುರಕ್ಷತಾ ಪರಿಕರಗಳನ್ನು ಉಪಯೋಗ ಮಾಡಿಕೊಂಡು ಹೊರಗೆ ಕೆಲಸ ಮಾಡಿ, ನಿಮ್ಮೆಲ್ಲರ ಆರೋಗ್ಯ ರಕ್ಷಣೆ ನಮ್ಮೆಲ್ಲರದ್ದಾಗಿದೆ. ನಿಮಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುತ್ತೇವೆ ಎಂದರು.
ಮುಖ್ಯಾಧಿಕಾರಿ ಸತ್ಯನಾರಾಯಣ ಮಾತನಾಡಿ, ಪ್ರತಿಯೊಬ್ಬ ಪೌರಕಾರ್ಮಿಕರು, ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ನಮ್ಮ ಮಕ್ಕಳೂ ಪೌರಕಾರ್ಮಿಕರಾಗಬೇಕು ಎಂದು ಚಿಂತಿಸಬೇಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿ, ಅವರು, ಅಧಿಕಾರಿಗಳಾಗಲಿ, ಆಡಳಿತ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕು. ನೀವು ಪ್ರತಿನಿತ್ಯ ಕೆಲಸ ಮುಗಿದ ಕೂಡಲೇ ಸ್ನಾನ ಮಾಡಿ, ಶುಭ್ರವಾದ ಬಟ್ಟೆಗಳನ್ನು ಧರಿಸಿಕೊಳ್ಳಿ. ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ, ತಕ್ಷಣ, ನಮ್ಮ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದರು.
ಪುರಸಭೆ ಸದಸ್ಯ ವಿ.ನಂದಕುಮಾರ್ ಮಾತನಾಡಿ, ಪೌರಕಾರ್ಮಿಕರು, ಉತ್ತಮ ಗುಣಮಟ್ಟದ ಆಹಾರ ಸೇವನೆ ಮಾಡಿ, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದಲ್ಲಿ ಉಂಟಾಗಬಹುದಾದAತಹ ಗಂಭೀರವಾದ ಸಮಸ್ಯೆಗಳನ್ನು ಆರಂಭದಲ್ಲೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ತಂಡ, ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿದರು. ಡಾ. ರಾಜು, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲಾವಣ್ಯ, ಪೃಥ್ವಿ, ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.



