ಮಾಗಡಿ: ಇಡೀ ಪ್ರಪಂಚವೇ ಮೆಚ್ಚುವಂತಹ ಸಂವಿಧಾನವನ್ನು ನೀಡಿದಂತಹ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಹಾ ಮಾನವತಾವಾದಿ ಎಂದು ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ರವರ 67 ನೇ ಮಹಾ ಪರಿನಿರ್ವಾಣ ಪ್ರಯುಕ್ತ ಕುದೂರಿನಿಂದ ಮಹಾರಾಷ್ಟ್ರದ ದಾದರ್ ನ ಅಂಬೇಡ್ಕರ್ ಸಮಾದಿವರೆಗೂ ಹಮ್ಮಿಕೊಂಡಿದ್ದ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ವಿದ್ಯೆ ಸಂಘಟನೆ ಮತ್ತು ಹೋರಾಟ ಬಹಳ ಮುಖ್ಯವಾದದ್ದು ಅಂಬೇಡ್ಕರ್ ಅವರ ಪ್ರಮುಖ ಮೂಲ ಮಂತ್ರವಾಗಿತ್ತು.
ಇದರಿಂದ ನಮಗೆ ಆದ ನೋವನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ನೂತನ ಸಮಾಜದ ಚಿಂತನೆ ಆಗಬೇಕಾದರೆ ಚಿಂತನೆ ಇರುವ ನಾಯಕರು ಬೇಕಾಗುತ್ತದೆ. ದಲಿತ ಸಂಘರ್ಷ ಸಮಿತಿಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಸಂಘಟನೆಯ ಪ್ರತಿಫಲವಾಗಿ ಇಂತಹ ಕಾರ್ಯಕ್ರಮಗಳು ನಡೆಯುತ್ತವೆ.ಪ್ರಸ್ತುತ ರಾಜಕಾರಣದಲ್ಲಿ ಹಣ, ಜಾತಿ, ತೋಳ್ಬಲ ಮತ್ತು ಪಕ್ಷ ಮುಖ್ಯವಾಗಿದೆ. ಇವೆಲ್ಲವೂ ಇಲ್ಲದಿದ್ದರೂ ಸಹ ನನ್ನನ್ನು ಈ ಕ್ಷೇತ್ರದ ಜನತೆ ಎರಡು ಭಾರಿ ಗೆಲ್ಲಿಸಿದ ಕಾರಣವಾಗಿ ಜನರ ಋಣ ತೀರಿಸಿರುವ ಆತ್ಮತೃಪ್ತಿ ನನಗಿದೆ ಎಂದು ರೇವಣ್ಣ ತಿಳಿಸಿದರು.
ಎಸ್ ಸಿ ಎಸ್ ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ರಾಜ್ಯದ್ಯಕ್ಷ ಶಿವಶಂಕರ್ ಮಾತನಾಡಿ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ದೇಶದಲ್ಲಿ ಕಟ್ಟಕಡೆಯ ವ್ಯಕ್ತಿಯೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ.ಆದರೆ ದೇಶದಲ್ಲಿ ಜಾತಿ, ಧರ್ಮ, ದೇವರ ಹೆಸರಿನಲ್ಲಿ ನಮ್ಮ ನಮ್ಮಲ್ಲಿಯೇ ಒಡಕುಮೂಡಿಸಿ ನಮ್ಮಗಳ ಹಕ್ಕುಗಳಿಗೆ ಬೆಂಕಿ ಇಡುತ್ತಿದ್ದಾರೆ. ದೇಶದಲ್ಲಿ ಜನ ವಿರೋಧಿ ನೀತಿಯು ತಾಂಡವವಾಡುತ್ತಿದ್ದು ಎಲ್ಲೆಡೆ ಜಾತಿ ಸಂಘರ್ಷವು ನಡೆಯುತ್ತಿದೆ. ಜನತೆ ಕರಾಳತೆಯನ್ನು ಎದುರಿಸುವ ಕಾಲ ಬಂದಿದ್ದು ಯುವಕರು ಜಾಗೃತಿಯ ಹೆಜ್ಜೆ ಇಡಬೇಕೆಂದು ಶಿವಶಂಕರ್ ಕರೆ ನೀಡಿದರು.
ನಾಮ ನಿರ್ದೇಶಕ ರಾಮನಹಳ್ಳಿ ನರಸಿಂಹಮೂರ್ತಿ ಮಾತನಾಡಿ ಅಸ್ಪ್ರಶ್ಯತೆ ಎಂಬ ವಿಷ ಬೀಜವನ್ನು ತೊಡೆದು ಹಾಕದಿದ್ದರೆ ಮುಂದೊಂದು ದಿನ ಶೋಷಿತ ವರ್ಗಗಳು ಬುಗಿಲೆದ್ದು ದೊಡ್ಡ ಕ್ರಾಂತಿಯೇ ಆಗಬಹುದು. ಬುದ್ದ, ಬಸಬಣ್ಣ, ಕನಕದಾಸರು, ಅಂಬೇಡ್ಕರ್, ಶ್ರೀ ನಾರಾಯಣಗುರು, ಜ್ಯೋತಿರಾಂಬಾಪುಲೆ, ಪೆರಿಯಾರ್, ಛತ್ರಪತಿ ಇನ್ನು ಮುಂತಾದ ಮಹಾ ಪುರುಷರು ಅಸ್ಪ್ರಶ್ಯತೆ ಮೂಲ ಬೇರನ್ನು ಕಿತ್ತು ಹಾಕಲು ಶ್ರಮಿಸಿದ್ದರು ಎಂದರು.
ಪಾಲನಹಳ್ಳಿ ಮಠಾಧೀಶರಾದ ಶ್ರೀ ಸಿದ್ದರಾಜು ಮಹಾಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹೆಚ್.ಎನ್.ಅಶೋಕ್, ಮುಖಂಡರಾದ ಕಲ್ಕೆರೆ ಧನಂಜಯ, ಮುಮ್ಮೇನಹಳ್ಳಿ ಜಯರಾಂ, ಸಿ.ಜಯರಾಮ್, ಕನ್ನಸಂದ್ರ ರವಿಕುಮಾರ್, ಎಂ.ಜಿ.ನರಸಿಂಹಮೂರ್ತಿ, ಕುದೂರು ಮಂಜೇಶ್, ತೋಟದಮನೆ ಗಿರೀಶ್, ತಟವಾಳ್ ಪ್ರಕಾಶ್, ಚಂದೂರಾಯನಹಳ್ಳಿ ವನಜಾ, ತಿರುಮಲೆ ಪುಷ್ಪ, ಸಿದ್ದರಾಜು, ಜೀವಿಕ ಗಂಗಹನುಮಯ್ಯ, ದೊಡ್ಡಿ ಲಕ್ಷ್ಮಣ್, ಜುಟ್ಟನಹಳ್ಳಿ ರಾಮಣ್ಣ, ಮಧುಸೂದನ್, ರಾಜು ಸೇರಿದಂತೆ ಮತ್ತಿತರಿದ್ದರು.