ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ. ರಾಜ್ ಕುಮಾರ್ ವಾರ್ಡ್ ನ ಬಸವೇಶ್ವರನಗರ ಮುಖ್ಯರಸ್ತೆಯಲ್ಲಿರುವ ಕಳೆದ ಕೆಲವು ತಿಂಗಳ ಹಿಂದೆ ಸುಮಾರು 32 ಕೋಟಿ ವೆಚ್ಚದಲ್ಲಿ ನವಿಕೃತಗೊಂಡಿರುವ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣಕ್ಕೆ ನೂತನ ಶಾಸಕ ಪ್ರಿಯಕಷ್ಣ ರವರು ವೀಕ್ಷಣೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸಾರ್ವಜನಿಕರು, ಕ್ರೀಡಾಪಟುಗಳು ಹಾಗೂ ಹಿರಿಯ ನಾಗರಿಕರು ಕ್ರೀಡಾಂಗಣದ ಕಳಪೆ ಕಾಮಗಾರಿಗಳ ಬಗ್ಗೆ, ಸಿಂಥೆಟಿಕ್ ಟ್ರಾಕ್ ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ, ದಿನ ನಿತ್ಯ ಕಾಡುವ ಅವ್ಯವಸ್ಥೆಗಳ ಬಗ್ಗೆ, ಶೌಚಾಲಯ ಮತ್ತು ಕ್ರೀಡಾಂಗಣದಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ಹೆಚ್ಚಿನ ಅಸಮಾಧಾನ ವ್ಯಕ್ತಪಡಿಸಿದರು.
ವಾಯುವಿಹಾರ ಮಾಡುವ ಟ್ರಕ್‍ನಲ್ಲಿ ಅಳವಡಿಸಿರುವ ಸೀಮೆಂಟ್ ಬ್ಲಾಕ್‍ಗಳು ಸರಿಯಾಗಿ ಸಮತಟ್ಟಾಗಿಲ್ಲ. ಇದರಿಂದ ಎಡವಿ ಬೀಳುವುದು ಸಾಮಾನ್ಯವಾಗಿದೆ, ಇನ್ನು ಮಳೆ ಬಂದಾಗಲೆಲ್ಲಾ ಕ್ರೀಡಾಂಗಣ ನೀರು ನಿಂತು ಕೆರೆಯಂತಾಗುತ್ತಿದೆ. ಮಕ್ಕಳು ಕ್ರೀಡಾಂಗಣದಲ್ಲಿ ಆಟವಾಡಲು ಕಷ್ಟವಾಗುತ್ತದೆ. ಇನ್ನು ಶೌಚಾಲಯಗಳ ನಲ್ಲಿಗಳನ್ನು ಕಿತ್ತು ಹಾಕಲಾಗಿದೆ. ನಿರ್ವಹಣೆ ಕೂಡ ಕಳಪೆಯಾಗಿದೆ ಎಂದು ದೂರಿದರು.
ಇದಲ್ಲದೆ, ಭದ್ರತೆಗಾಗಿ ಸಿಸಿ ಕ್ಯಾಮೆರಾಗಳು ಮತ್ತು ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ನೇಮಿಸುವುದು ಅಗತ್ಯವಿದೆ. ಇನ್ನು ಸಿಂಥಟಿಕ್ ಟ್ರ್ಯಾಕ್‍ಗಳನ್ನು ನಿರ್ಮಿಸಬೇಕಾಗಿದ್ದು, ಆದರೆ ಅದನ್ನು ಇನ್ನು ಮಾಡಿಲ್ಲ. ತರಾತುರಿಯಲ್ಲಿ ಕಳೆದ ಬಾರಿಯ ಶಾಸಕರು ಕ್ರೀಡಾಂಗಣವನ್ನು ತರಾತುರಿಯಲ್ಲಿ ಮುಖ್ಯಮಂತ್ರಿಗಳನ್ನ ಕರೆಸಿ ಕ್ರೀಡಾಂಗಣವನ್ನು ಉದ್ಘಾಟಿಸಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ. ಬಿ ಆರ್ ಅಂಬೇಡ್ಕರ್ ಅನುಯಾಯಿಗಳ ವಿಚಾರ ವೇದಿಕೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆಗೂಡಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ವೇದಿಕೆಯ ಪದಾಧಿಕಾರಿಗಳು ಪ್ರಿಯಕಷ್ಣ ರವರಿಗೆ ಶಾಲು ಹೊದಿಸಿ ಸನ್ಮಾನಿಸಿ ಸಂವಿಧಾನದ ಪೀಠಿಕೆಯನ್ನು ಮತ್ತು ಹೂವಿನ ಗಿಡವನ್ನು ನೀಡುವ ಮೂಲಕ ಗೌರವಿಸಿದರು.
ಈ ವೇಳೆ ಮಾಜಿ ಬಿಬಿಎಂಪಿ ಸದಸ್ಯರು, ಗೋವಿಂದರಾಜನಗರ ಬ್ಲಾಕ್ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ವಾರ್ಡ್ ಅಧ್ಯಕ್ಷರು, ದಲಿತ ಮುಖಂಡರು, ಕಾಂಗ್ರೆಸ್ ಮುಖಂಡರು, ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
Leave a Review