ದೇವನಹಳ್ಳಿ: ತಾಲ್ಲೂಕು ಕಚೇರಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ಕೊರಂಗಾವ್ 206 ನೇ ವಿಜಯೋತ್ಸವ ಕಾರ್ಯಕ್ರಮ ನಡೆಯಿತು.ದೇವನಹಳ್ಳಿ ಮಿನಿವಿಧಾನಸೌಧ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೊರಂಗಾವ್ 206 ನೇ ವರ್ಷದ ವಿಜಯೋತ್ಸವದಲ್ಲಿ ಮಡಿದ ವೀರ ಯೋಧರನ್ನು ಸ್ಮರಿಸುವ ಕಾರ್ಯದಲ್ಲಿ ತಹಸೀಲ್ದಾರ್ ಶಿವರಾಜ್ ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಭೀಮಾ ನದಿಯ ತೀರದಲ್ಲಿದ್ದ ಆ ಕೋರೇಗಾಂವ್ ರಣಾಂಗಣದಲ್ಲಿ ಬಾಂಬೆ ರೆಜಿಮೆಂಟ್ನ ಕೇವಲ 500 ಜನ ಮಹಾರ್ ಕಾಲ್ದಳದ ಸೈನಿಕರು ಪೂನಾದ 250 ಅಶ್ವದಳದವರ ನೆರವಿನೊಂದಿಗೆ, ಜೊತೆಗೆ ಮದ್ರಾಸ್ನ 24 ಗನ್ಮೆನ್ಗಳ ಸಹಾಯದಿಂದ 20 ಸಾವಿರ ಅಶ್ವದಳವಿದ್ದ,
8 ಸಾವಿರ ದಷ್ಟು ಕಾಲ್ದಳವಿದ್ದ ಪೇಶ್ವೆಯ ಬೃಹತ್ ಸೇನೆಯ ವಿರುದ್ಧ 1818 ಜನವರಿ 1ರಂದು ಕೋರೆಗಾಂವ್ನಲ್ಲಿನ ಮಹಾರ್ ಸೈನಿಕರ ಈ ಸ್ಮಾರಕಕ್ಕೆ ಅಂಬೇಡ್ಕರರು ಪ್ರತಿ ವರ್ಷ ಭೇಟಿ ನೀಡುತ್ತಿದ್ದರು. ಅಲ್ಲದೆ ಅಗಲಿದ ಯೋಧರಿಗೆ ಬಾಬಾಸಾಹೇಬರು ತಮ್ಮ ಅಭೂತಪೂರ್ವ ನಮನ ಸಲ್ಲಿಸುತ್ತಿದ್ದರು ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಂಘಟನಾ ಸಂಚಾಲಕ ತಿಮ್ಮರಾಯಪ್ಪ ಮಾತನಾಡಿ, ಮೂವತ್ತು ಸಾವಿರ ಸೈನಿಕರನ್ನು ಕೇವಲ ಐನೂರು ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟ.
ಶೋಷಿತರು ಮೇಲ್ಜಾತಿ ಶೋಷಕರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ಘೋಷಿಸಿದ, ಅಸ್ಪಶ್ಯನೋರ್ವ ನಡೆದ ದಾರಿಯಲ್ಲಿ ನಡೆದು ಮಲಿನಗೊಳ್ಳುವುದನ್ನು ತಡೆಯಲು ಅಸ್ಪಶ್ಯನು ತನ್ನ ನಡುವಿಗೆ ಹಗ್ಗವೊಂದನ್ನು ಬಿಗಿದು ಅದಕ್ಕೆ ಕಸಪೊರಕೆ ಯೊಂದನ್ನು ಕಟ್ಟಿ ತಾನು ನಡೆದ ದಾರಿಯನ್ನು ಆತ ಗುಡಿಸಬೇಕಾಗಿತ್ತು ಎಂದು ಅಂದಿನ ಇತಿಹಾಸದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಸಂಘಟನಾ ಸಂಚಾಲಕ ನರಸಪ್ಪ, ಮುಖಂಡರಾದ ವೆಂಕಟೇಶಪ್ಪ, ವೆಂಕಟೇಶ್, ರಮೇಶ್, ನಿತಿನ್, ರಾಮು, ಚನ್ನಕೃಷ್ಣಪ್ಪ, ನಾರಾಯಣಸ್ವಾಮಿ ಇನ್ನು ಹಲವು ಮುಖಂಡರು ಇದ್ದರು.