ಧರ್ಮಾವರಂ: ಸಲಾರ್ ಸಿನಿಮಾದ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶದಿಂದಾಗಿ, ಪ್ರಬಾಸ್ ಅಭಿಮಾನಿಯೋರ್ವ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯ ಧರ್ಮಾವರಂ ಪಟ್ಟಣದಲ್ಲಿ ನಡೆದಿದೆ.
ಪ್ರಭಾಸ್ ಅಭಿಮಾನಿ ಬಾಲರಾಜು (27) ಗುರುವಾರ ಪಟ್ಟಣದ ರಂಗ ಚಿತ್ರಮಂದಿರದ ಮುಂಭಾಗದ ಮೇಲೆ ಫ್ಲೆಕ್ಸಿ ಹಾಕುವಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ.
ಫ್ರೇಮ್ ಮೇಲಿದ್ದ ಕಬ್ಬಿಣದ ರಾಡ್ ವಿದ್ಯುತ್ ತಂತಿಗಳಿಗೆ ತಗುಲಿದ ಪರಿಣಾಮ ಬಾಲರಾಜು ವಿದ್ಯುತ್ ಆಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಜೇಂದ್ರ ಎಂಬ ಯುವಕ ಗಾಯಗೊಂಡಿದ್ದಾನೆ.
ಇತರ ನಾಲ್ವರು ಯುವಕರು ಅವಘಡದಲ್ಲಿ ಬದುಕುಳಿದಿದ್ದಾರೆ. ವಿದ್ಯುತ್ ತಂತಿಗಳು ಕಡಿಮೆ ಎತ್ತರದಲ್ಲಿದ್ದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಬಾಲರಾಜು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಮೃತ ಬಾಲರಾಜು ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಸ್ಥಳಕ್ಕೆ ಧರ್ಮಾವರಂ 1ನೇ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.