ಸೂರತ್: ಇಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಅನುಭವಿ ಬ್ಯಾಟರ್ ಮನೀಶ್ ಪಾಂಡೆ ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು ರೈಲ್ವೇಸ್ ವಿರುದ್ಧ 1 ವಿಕೆಟ್ ರೋಚಕ ಗೆಲುವು ಸಾಧಿಸಿದೆ.
226 ರನ್ ಗೆಲುವಿನ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಒಂದು ಹಂತದಲ್ಲಿ 214ಕ್ಕೆ ಒಂಬತ್ತು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.ಕೊನೆಯ ವಿಕೆಟ್ಗೆ ಗೆಲುವಿಗೆ 12 ರನ್ಗಳು ಬೇಕಾಗಿತ್ತು. ಈ ವೇಳೆ ಹೋರಾಟ ನಡೆಸಿದ ಪಾಂಡೆ ತಂಡಕ್ಕೆ ಗೆಲುವು ತಂದುಕೊಟ್ಟರು.
ಮನೀಶ್ ಪಾಂಡೆ 121 ಎಸೆತಗಳಲ್ಲಿ 67 ರನ್ ಗಳಿಸಿ (6 ಬೌಂಡರಿ, 1 ಸಿಕ್ಸರ್) ಅಜೇಯರಾಗಿ ಉಳಿದರು. ಕಡೆಯದಾಗಿ ಕಣಕ್ಕಿಳಿದ ವಾಸುಕಿ ಕೌಶಿಕ್ ಎರಡು ಎಸೆತಗಳಲ್ಲಿ ಅಜೇಯ 1 ರನ್ ಗಳಿಸಿದರು. ರವಿಕುಮಾರ್ ಸಮರ್ಥ್ (35), ಅನೀಶ್ ಕೆವಿ (34), ಶ್ರೀನಿವಾಸ ಶರತ್ (23) ಹಾಗೂ ವಿಜಯಕುಮಾರ್ ವೈಶಾಖ (38) ತಂಡಕ್ಕೆ ಉತ್ತಮ ಮೊತ್ತ ನೀಡಿದರು.
ಎರಡೂ ಇನ್ನಿಂಗ್ಸ್ಗಳಿಂದ ತಲಾ ಐದು ವಿಕೆಟ್ ಸೇರಿ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಗಳಿಸಿದ ರೈಲ್ವೇಸ್ ತಂಡದ ಸ್ಪಿನ್ನರ್ ಆಕಾಶ್ ಪಾಂಡೆ ಹೋರಾಟ ಫಲಿಸಲಿಲ್ಲ. ರೈಲ್ವೇಸ್ನ 155 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 174 ರನ್ ಗಳಿಸಿತ್ತು. ಬಳಿಕ ವಿಜಯಕುಮಾರ್ ವೈಶಾಖ (67ಕ್ಕೆ 5 ವಿಕೆಟ್) ದಾಳಿಗೆ ತತ್ತರಿಸಿದ್ದ ರೈಲ್ವೇಸ್ ತಂಡ ಎರಡನೇ ಇನ್ನಿಂಗ್ಸ್ನಲ್ಲಿ 244ಕ್ಕೆ ಆಲೌಟ್ ಆಗಿತ್ತು.



