ಬೆಂಗಳೂರು: ರಾಜ್ಯದ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ.
ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿ ಆದೇಶಿಸಿದೆ.
ಮುಂದಿನ ಪರೀಕ್ಷೆಯ ವೇಳೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಲು ಹೈಕೋರ್ಟ್ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ. ಈ ಮೂಲಕ ಸ್ಥಗಿತಗೊಂಡಿದ್ದ ಪರೀಕ್ಷೆ ಮುಂದುವರೆಸಲು ಹೈಕೋರ್ಟ್ ಆದೇಶ ಹೊರಡಿಸಿದೆ.
ಈ ಹಿಂದೆ ರಾಜ್ಯ `ಹೈ’ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿತ್ತು. ಆನಂತರ ಸುಪ್ರೀಂಕೋರ್ಟ್ ವಿಭಾಗೀಯಪೀಠ ಆದೇಶಕ್ಕೂ ತಡೆ ನೀಡಿ ವಿಚಾರಣೆ ನಡೆಸುವಂತೆ ಸೂಚಿಸಿತ್ತು. ರಾಜ್ಯ ಹೈಕೋರ್ಟ್ನ ಆದೇಶದಿಂದಾಗಿ ವಿದ್ಯಾರ್ಥಿಗಳಲ್ಲಿನ ಗೊಂದಲಕ್ಕೆ ತೆರೆಬಿದ್ದಂತಾಗಿದೆ.
5, 8, 9ನೇ ತರಗತಿಯ ಎರಡು ಪರೀಕ್ಷೆಗಳು ಈಗಾಗಲೇ ನಡೆದಿದ್ದು, ಉಳಿದ ಪರೀಕ್ಷೆಗಳು ನಡೆಯಲು ಬಾಕಿಯಿತ್ತು.