ಬೆಂಗಳೂರು: ಅಶ್ಲೀಲ ವಿಡೀಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿರುವ ರಾಜಕೀಯ ನಾಯಕ ನಡುವಳಿಕೆಗೆ ಕಡಿವಾಣ ಹಾಕಬೇಕು. ಎಸ್ಐಟಿ ತನಿಖೆಯು ಕಾಯ್ದೆ ಅನುಸಾರ ಕಾಲಮಿತಿಯೊಳಗೆ ನಡೆಯಬೇಕು ಎಂದು ಆಗ್ರಹಿಸಿ ಸಾಹಿತಿ ಹಾಗೂ ಚಿಂತಕರು ಪ್ರಜ್ಞಾವಂತ ನಾಗರಿಕರ ಹೆಸರಿನಲ್ಲಿ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣರ ಅಶ್ಲೀಲ ವಿಡಿಯೋ ಬಹಿರಂಗ ವಿಚಾರವನ್ನು ಮುಂದಿಟ್ಟುಕೊಂಡು ಸಾಹಿತಿಗಳು, ಬರಹಗಾರರು ಸೇರಿದಂತೆ ಮುಖಂಡರಿಂದ ಸಿಎಂ ಸಿದ್ಧರಾಮಯ್ಯರಿಗೆ ಬಹಿರಂಗ ಪತ್ರ ಬರೆಯಲಾಗಿದೆ. ಸುಧೀರ್ಘ 24 ಪುಟಗಳ ಪತ್ರ ಇದಾಗಿದ್ದು, ಇದರಲ್ಲಿ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ಉಲ್ಲೇಖಿಸಿ ಹಲವು ವಿಚಾರಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ.
ಪ್ರಜ್ವಲ್ ರೇವಣ್ಣರ ಪ್ರಕರಣದಲ್ಲಿ ಸರ್ಕಾರದ ನಡೆ ಹಾಗೂ ಹೆಚ್ಡಿಕೆ ಕುಟುಂಬದ ವಿರುದ್ದ ಬೇಸರವನ್ನು ಹೊರ ಹಾಕಲಾಗಿದ್ದು, 16 ಬೇಡಿಕೆಗಳನ್ನ ಮುಂದಿಟ್ಟು ಸುದೀರ್ಘ ಬಹಿರಂಗ ಪತ್ರ ಬರೆಯಲಾಗಿದೆ.ಹಿರಿಯ ಲೇಖಕರಾದ ಡಾ ವಿಜಯಾ, ಸಾಹಿತಿ ಡಾ.ಜಿ ರಾಮಕೃಷ್ಣ, ವಸುಂಧರಾ ಭೂಪತಿ, ಮೀನಾಕ್ಷಿ ಬಾಳಿ, ಕೆ.ನೀಲಾ, ಕೆ.ಎಸ್.ವಿಮಲಾ, ಕುಂ.ವೀರಭದ್ರಪ್ಪ, ಮುಜಫರ್ ಅಸ್ಸಾದಿ ಸೇರಿದಂತೆ ಒಟ್ಟು 116 ಜನರಿಂದ ಪತ್ರಕ್ಕೆ ಸಹಿ ಹಾಕಿದ್ದಾರೆ.
ಪ್ರಜ್ಞಾವಂತ ನಾಗರಿಕರ ಬಹಿರಂಗ ಪತ್ರ ಎಂದು ಪತ್ರ ಬರೆದಿರುವ ಸಾಹಿತಿಗಳು, ಪ್ರಜ್ಞಾವಂತ ನಾಗರಿಕರ ಬಹಿರಂಗ ಪತ್ರದಲ್ಲಿ ಬೇಸರದ ನುಡಿಗಳನ್ನು ಹೊರಹಾಕಿದ್ದಾರೆ.ಸಂತ್ರಸ್ತರ ಪೋಟೋ, ವಿಡಿಯೋ ದಾಖಲಿಸಿ ಇಟ್ಟುಕೊಂಡಿರುವುದು. ದೂರು ಕೊಡದಂತೆ ಬೆದರಿಸುವುದು, ಅಪಹರಿಸುವುದು. ಅನೇಕ ವರ್ಷಗಳಿಂದ ನಡೆದುಕೊಂಡ ಬಂದಿರುವ ಹಗರಣವಿದು. ರಾಜಕೀಯ ನಾಯಕರು ತಮ್ಮ ಹಿತಾಸಕ್ತಿಗೆ, ಚುನಾವಣೆ ಲಾಭಕ್ಕಾಗಿ ಬಳಸುತ್ತಿರುವುದು ಆಘಾತಕಾರಿಯಾಗಿದೆ.
ಪ್ರಜ್ವಲ್ ತಾತ, ತಂದೆ, ತಾಯಿ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ ಎಲ್ಲರೂ ಪ್ರಜಾಪ್ರಭುತ್ವದ ಎಲ್ಲಾ ಹುದ್ದೆಗಳನ್ನ, ಸವಲತ್ತು ಬಳಸಿಕೊಂಡಿದ್ದಾರೆ.
ಪ್ರಜ್ವಲ್ ರೇವಣ್ಣ ಮತ್ತು ಅವರ ಕುಟುಂಬ ಪ್ರಜಾಪ್ರಭುತ್ವದ ಮುಸುಕಿನೊಳಗೆ ಪ್ರಜಾಪ್ರತಿನಿಧಿಗಳೆಂಬ ಧಿರಿಸು ಧರಿಸಿದ್ದಾರೆ. ಪ್ರಕರಣ ಹೊರ ಬಂದ ತಕ್ಷಣ ಚುನಾವಣಾ ಸ್ಪರ್ಧೆಗೆ ಅವಕಾಶ ನೀಡಬಾರದಾಗಿತ್ತು.
ಹಗರಣ ಬಯಲಾಗಿ ಐದು ದಿನಗಳು ಆರೋಪಿಯನ್ನ ಸ್ವತಂತ್ರವಾಗಿ ಬಿಟ್ಟಿದ್ದು, ಅವನ ಮೇಲೆ ಕಣ್ಗಾವಲು ಹಾಕಿಲ್ಲ. ಸರ್ಕಾರದ ಮೇಲೆ ವಿಶ್ವಾಸವಿಟ್ಟು ಮಹಿಳೆಯರು ಸುರಕ್ಷಿತವಾಗಿರಲೂ ಸಾಧ್ಯವೇ? ಎಂಬ ಪ್ರಶ್ನೆ ಮೂಡಿದೆ. ಸಂತ್ರಸ್ತರ ಕುಟುಂಬಗಳು ಮಾನಸಿಕ ಯಾತನೆಗಳಿಗೆ ಗುರಿಯಾಗಿವೆ.
ಅಲ್ಲದೆ ವಿಡಿಯೋಗಳು ಲಕ್ಷಾಂತರ ಜನರಿಗೆ ತಲುಪಿವೆ. ಇದರಿಂದ ಯುವ ಜನರು, ಕಾಮುಕರು, ಮಕ್ಕಳ ಮೇಲೆ ಪರಿಣಾಮ ಬೀರಬಹುದಾಗಿದೆ ಎಂದು ಆತಂಕವನ್ನು ಸಾಹಿತಿಗಳು ವ್ಯಕ್ತಪಡಿಸಿದ್ದಾರೆ.