ಬಿಷ್ಕೆಕ್ (ಕಿರ್ಗಿಸ್ತಾನ): ಭಾರತದ ಕುಸ್ತಿಪಟುಗಳಾದ ಅಂಜು ಮತ್ತು ಹರ್ಷಿತಾ ಇಲ್ಲಿ ನಡೆಯುತ್ತಿರುವ ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಫೈನಲ್ ಪ್ರವೇಶಿಸಿದರು. ಆದರೆ, ಸರಿತಾ ಮೋರ್ ಆರಂಭಿಕ ಸುತ್ತಿನಲ್ಲೇ ನಿರ್ಗಮಿಸಿದರು. ರೈಲ್ವೇಸ್ನ ಕುಸ್ತಿಪಟು ಅಂಜು ಈಚೆಗೆ ನಡೆದ ಆಯ್ಕೆ ಟ್ರಯಲ್ಸ್ನಲ್ಲಿ ವಿನೇಶಾ ಪೋಗಾಟ್ ಅವರಿಗೆ ಆಘಾತ ನೀಡಿದ್ದರು.
ಭಾನುವಾರ ನಡೆದ 53 ಕೆ.ಜಿ ವಿಭಾಗದ ಸೆಮಿಫೈನಲ್ನಲ್ಲಿ 9-6 ರಿಂದ ಚೀನಾದ ಚುನ್ ಲೀ ಅವರನ್ನು ಹಿಮ್ಮೆಟ್ಟಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದರು. ಫೈನಲ್ನಲ್ಲಿ ಅವರು ಕೊರಿಯಾದ ಜಿ ಹಯಾಂಗ್ ಕಿಮ್ ಅವರನ್ನು ಎದುರಿಸಲಿದ್ದಾರೆ. ಅವರು ಮೊದಲೆರಡು ಸುತ್ತಿನಲ್ಲಿ ಫಿಲಿಪ್ಪೀನ್ಸ್ನ ಅಲಿಯಾ ರೋಸ್ ಗವಾಲೆಜ್ ಮತ್ತು ಶ್ರೀಲಂಕಾದ ನೆತ್ಮಿ ಅಹಿಂಸಾ ಫೆರ್ನಾಂಡೋ ವಿರುದ್ಧ ತಾಂತ್ರಿಕ ಕೌಶಲದ ಆಧಾರದಲ್ಲಿ ಗೆಲುವು ಪಡೆದಿದ್ದರು.
72 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಹರ್ಷಿತಾ ಉಜ್ಬೇಕಿಸ್ತಾನದ ಓಜೋಡಾ ಜರಿಪ್ಬೋವಾ ಅವರನ್ನು ಸೋಲಿಸಿದರು. ಅವರು ತಾಂತ್ರಿಕ ಕೌಶಲದ ಆಧಾರದಲ್ಲಿ (13-3) ಮೇಲುಗೈ ಸಾಧಿಸಿದರು. ಅದಕ್ಕೂ ಮುನ್ನ ಅವರು ಕಜಕಿಸ್ತಾನದ ಅನಸ್ತಾಸಿಯಾ ಪನಾಸೊವಿಚ್ ಅವರನ್ನು 5-0ರಿಂದ ಮಣಿಸಿದ್ದರು. ಫೈನಲ್ನಲ್ಲಿ ಅವರು ಚೀನಾದ ಕಿಯಾನ್ ಜಿಯಾಂಗ್ ವಿರುದ್ಧ ಸೆಣಸಲಿದ್ದಾರೆ. 2021ರ ವಿಶ್ವ ಚಾಂಪಿಯನ್ಷಿಪ್ನ ಪದಕ ವಿಜೇತೆ ಸರಿತಾ ಅವರು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 4-8 ರಿಂದ ಮಂಗೋಲಿಯಾದ ಗಂಟುಯಾ ಎಂಖ್ಬಾತ್ ವಿರುದ್ಧ ಪರಾಭವಗೊಂಡರು. ಮನೀಶಾ ಭನ್ವಾಲಾ (62 ಕೆಜಿ) ಮತ್ತು ಅಂತಿಮ್ ಕುಂದು (65 ಕೆಜಿ) ಕಂಚಿನ ಪದಕದ ಸ್ಪರ್ಧೆಯಲ್ಲಿದ್ದಾರೆ.