ಚೆನ್ನೈ: ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಕೆಂಡಕಾರಿದ್ದು, ‘ಡಿಎಂಕೆ ಸರ್ಕಾರ ತೊಲಗುವವರೆಗೂ ಚಪ್ಪಲಿ ಧರಿಸುವುದಿಲ್ಲ’ ಎಂದು ಶಪಥ ಗೈದಿದ್ದಾರೆ.
ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲೇ ಇಬ್ಬರು ಕಾಮುಕರು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಬುಧವಾರ ಕ್ರಿಸ್ ಮಸ್ ಹಬ್ಬದ ಹಿನ್ನಲೆಯಲ್ಲಿ ಮಧ್ಯರಾತ್ರಿ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸಿ ತನ್ನ ಸ್ನೇಹಿತನೊಂದಿಗೆ ವಿದ್ಯಾರ್ಥಿನಿ ಕ್ಯಾಂಪಸ್ ಗೆ ಮರಳುತ್ತಿದ್ದಾಗ ಅವರನ್ನು ಇಬ್ಬರು ಕಾಮುಕರು ಅಡ್ಡಗಟ್ಟಿದ್ದರು. ಈ ವೇಳೆ ಸ್ನೇಹಿತನ ಮೇಲೆ ಹಲ್ಲೆ ಮಾಡಿ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದರು.
ಈ ಘಟನೆ ಸಂಬಂಧ ಕೊತ್ತೂರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ವಿಚಾರ ಇದೀಗ ತಮಿಳುನಾಡು ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿದೆ.
ಪ್ರಸ್ತುತ ಬಂಧನಕ್ಕೀಡಾಗಿರುವ ಆರೋಪಿಗಳ ಪೈಕಿ ಓರ್ವನಾಗಿರುವ ಆರೋಪಿ ಜ್ಞಾನಶೇಖರನ್ ಜೊತೆಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಸೇರಿದಂತೆ ಡಿಎಂಕೆ ಉನ್ನತ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಆರೋಪಿಸಿದ್ದಾರೆ. ಅಲ್ಲದೆ ಡಿಎಂಕೆ ಉನ್ನತ ನಾಯಕರೊಂದಿಗೆ ಆರೋಪಿ ಇರುವ ಚಿತ್ರಗಳನ್ನು ಕೆ ಅಣ್ಣಾಮಲೈ ಹಂಚಿಕೊಂಡಿದ್ದಾರೆ.
“ತಮಿಳುನಾಡಿನಾದ್ಯಂತ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣಗಳಿಂದ ಒಂದಂತ್ತು ಸ್ಪಷ್ಟವಾಗಿದ್ದು, ಕ್ರಿಮಿನಲ್ ಒಬ್ಬ ಡಿಎಂಕೆ ಸದಸ್ಯನಾದರೆ ಅವನಿಗೆ ಕಾರ್ಯಾಧ್ಯಕ್ಷ ಸ್ಥಾನದಂತಹ ಮಹತ್ವದ ಹುದ್ದೆ ಸಿಗುತ್ತದೆ. ಹಾಗೂ ಅವನ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಲಾಗುತ್ತದೆ. ಇದಲ್ಲದೆ, ಅವರನ್ನು ಕ್ರಿಮಿನಲ್ ದಾಖಲೆ ಹೊಂದಿರುವ ಕ್ರಿಮಿನಲ್ ಎಂದು ವರ್ಗೀಕರಿಸದೆ, ಅವನನ್ನು ಸ್ಥಳೀಯ ಪೊಲೀಸ್ ಠಾಣೆಯ ವಾಂಟೆಡ್ ಲಿಸ್ಟ್ನಿಂದಲೂ ಹೊರಗಿಡಲಾಗುತ್ತದೆ”ಎಂದು ಅಣ್ಣಾಮಲೈ ಕಿಡಿಕಾರಿದ್ದಾರೆ.
ಇನ್ನು ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಕೆ ಅಣ್ಣಾಮಲೈ, ಸ್ಥಳೀಯ ಡಿಎಂಕೆ ನಾಯಕರು ಹಾಗೂ ಮಂತ್ರಿಗಳ ಒತ್ತಡದಿಂದಾಗಿ, ಪೊಲೀಸರು ಅವರ (ಕ್ರಿಮಿನಲ್) ವಿರುದ್ಧದ ಪ್ರಕರಣಗಳನ್ನು ತನಿಖೆ ಮಾಡುತ್ತಿಲ್ಲ, ಇದು ಮತ್ತಷ್ಟು ಅಪರಾಧಗಳನ್ನು ಮಾಡಲು ಅವಕಾಶ ನೀಡುತ್ತದೆ.
15 ಲೈಂಗಿಕ ದೌರ್ಜನ್ಯ ಪ್ರಕರಣಗಳಿರುವ ವ್ಯಕ್ತಿಯನ್ನು ಇಷ್ಟು ದಿನ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟಿದ್ದಕ್ಕೆ ಇಂದು ಅಮಾಯಕ ವಿದ್ಯಾರ್ಥಿನಿಯೊಬ್ಬಳ ಮೇಲೆ ಈ ದೌರ್ಜನ್ಯ ನಡೆದಿದೆ. ಎಫ್ಐಆರ್ ನಲ್ಲಿದ್ದ ಸಂತ್ರಸ್ಥೆಯ ಫೋನ್ ನಂಬರ್ ಸಹಿತ ವಿಳಾಸ ಲೀಕ್ ಆಗಿದ್ದು ಇದರ ಹಿಂದೆ ಡಿಎಂಕೆ ಸರ್ಕಾರದ ಕೈವಾಡವಿದೆ. ಡಿಎಂಕೆ ಸರ್ಕಾರವೇ ಇದಕ್ಕೆ ಸಂಪೂರ್ಣ ಹೊಣೆ ಎಂದಿದ್ದಾರೆ.