This is the title of the web page
This is the title of the web page

ಉಪ್ಪಿಗೆ ಬಲಗೈ ಬಂಟನಾದ ಅನೂಪ್ ರೇವಣ್ಣ `ಕಬ್ಜ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟನೆ

`ಲಕ್ಷ್ಮಣ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಮಗ ಅನೂಪ್, ಆ ನಂತರ 2017ರಲ್ಲಿ ಬಿಡುಗಡೆಯಾದ ‘ಪಂಟ’ ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದರು. ಈಗ ಸುಮಾರು ಏಳು ವರ್ಷಗಳ ಗ್ಯಾಪ್ನ ಬಳಿಕ ಪುನಃ ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಚಿತ್ರದ ಮೂಲಕ ಅನೂಪ್ ರೀಎಂಟ್ರಿ ಕೊಡುತ್ತಿದ್ದಾರೆ. ‘ಕಬ್ಜ’ ಚಿತ್ರದಲ್ಲಿ ಅನೂಪ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ಉಪೇಂದ್ರ ಅವರ ಸ್ನೇಹಿತನ ಪಾತ್ರದಲ್ಲಿ ಅನೂಪ್ ನಟಿಸಿದ್ದು, ಇಡೀ ಚಿತ್ರದಲ್ಲಿ ಅವರ ಪಾತ್ರ ಸಾಗುತ್ತದಂತೆ.

‘ಕಬ್ಜ’ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಚಿತ್ರದಲ್ಲಿ ನಟಿಸಿದ ಅನುಭವ ಕುರಿತು ಮಾತನಾಡುವ ಅವರು, ‘ಉಪ್ಪಿ ಸಾರ್ ಬಲಗೈಬಂಟನಾಗಿ ನಟಿಸಿದ್ದೇನೆ. ಅವರ ಜತೆಗೆ ನಾನು ಸಹ ಭೂಗತಲೋಕದಲ್ಲಿ ಬೆಳೆಯುತ್ತೇನೆ. ಉಪ್ಪಿ ಸಾರ್ ನಿರ್ದೇಶಕರಾಗಿ, ನಟರಾಗಿ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು. ಅವರ ಜೊತೆಗೆ ನಾಲ್ಕು ವರ್ಷ ಕಾಲ ಕಳೆಯುವ ಅವಕಾಶ ಸಿಕ್ಕಿತು. ಅವರಿಂದ ತುಂಬಾ ಕಲಿತಿದ್ದೇನೆ. ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದೇನೆ. ನಾಲ್ಕು ವರ್ಷ ಹೋಗಿದ್ದೇ ಗೊತ್ತಾಗಲಿಲ್ಲ.

ಏಕೆಂದರೆ, ಚಿತ್ರದ ಕೆಲಸ ಅಷ್ಟಿತ್ತು. ಬರೀ ನಟನಾಗಿಯಷ್ಟೇ ಅಲ್ಲ, ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಈ ಚಿತ್ರದಿಂದತುಂಬಾ ಕಲಿತಿದ್ದೇನೆ. ಇಡೀ ತಂಡ ಬಹಳ ಕಷ್ಟಪಟ್ಟು ಕೆಲಸ ಮಾಡಿದೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಎಲ್ಲರ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.