ರೋಟರ್ಡ್ಯಾಮ್: ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜಾನಿಕ್ ಸಿನ್ನರ್ ಪ್ರಸಕ್ತ ಸೀಸನ್ನಲ್ಲಿ ಮತ್ತೂಂದು ಪ್ರಶಸ್ತಿಯೊಂದಿಗೆ ತಮ್ಮ ಫಾರ್ಮ್ ತೆರೆದಿರಿಸಿದ್ದಾರೆ. ಅವರು ಮೊದಲ ಬಾರಿಗೆ `ರೋಟರ್ಡ್ಯಾಮ್ ಓಪನ್’ ಟೆನಿಸ್ ಚಾಂಪಿಯನ್ ಆಗಿ ಮೂಡಿಬಂದರು.
ಹೈ ಕ್ವಾಲಿಟಿ ಫೈನಲ್ನಲ್ಲಿ ಇಟಲಿಯ ಜಾನಿಕ್ ಸಿನ್ನರ್ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ವಿರುದ್ಧ 7-5, 6-4 ಅಂತರದ ಗೆಲುವು ಸಾಧಿಸಿದರು. ಇದು ಅವರ ಸತತ 15ನೇ ಗೆಲುವು. ಇದರೊಂದಿಗೆ ಜೀವನಶ್ರೇಷ್ಠ 3ನೇ ರ್ಯಾಂಕಿಂಗ್ ಅಲಂಕರಿಸಿದರು. ಕಳೆದ 6 ಪಂದ್ಯಗಳಲ್ಲೂ ಸಿನ್ನರ್ ವಿರುದ್ಧ ಸೋಲನ್ನೇ ಕಂಡಿದ್ದ ಡಿ ಮಿನೌರ್, ಇಲ್ಲಿ ಮೊದಲ ಸೆಟ್ನಲ್ಲಿ ಗೆಲುವಿನ ಸೂಚನೆ ನೀಡಿದ್ದರು.
ಆದರೆ ಇವರಿಗೆ ರಕ್ಷಣಾತ್ಮಕ ಆಟ ಮುಳುವಾಯಿತು. ಸಿನ್ನರ್ ಹೆಚ್ಚು ಆಕ್ರಮಣಕಾರಿಯಾಗಿ ರ್ಯಾಕೆಟ್ ಬೀಸುತ್ತ ಮುನ್ನುಗ್ಗಿದರು.ಸಿನ್ನರ್ಗೆ ಕ್ವಾರ್ಟರ್ ಫೈನಲ್ನಲ್ಲಿ ವಾಕ್ ಓವರ್ ಲಭಿಸಿತ್ತು. ಕೆನಡಾದ ಹಿರಿಯ ಆಟಗಾರ ಮಿಲೋಸ್ ರಾನಿಕ್ ಗಾಯಾಳಾಗಿ ಹಿಂದೆ ಸರಿದಿದ್ದರು. ಸೆಮಿಫೈನಲ್ನಲ್ಲಿ ಸ್ಥಳೀಯ ಆಟಗಾರ ಟ್ಯಾಲನ್ ಗ್ರೀಕ್ಸ್ಪೂರ್ ಅವರನ್ನು ಮಣಿಸಿದರು.