ಕನ್ನಡ ಚಿತ್ರರಂಗದ ಸೂಪರ್ ಹಿಟ್ ಚಿತ್ರ “ಸಂಜು ವೆಡ್ಸ್ ಗೀತಾ”, ” ಹಾಗೆ ಸುಮ್ಮನೆ” ಚಿತ್ರಗಳ ನಿರ್ಮಾಪಕರಾದ ಪ್ರಮೋದ್ ನಾರಾಯಣ್ ಅವರ ನಿರ್ಮಾಣದಲ್ಲಿ ನೂತನ ಚಿತ್ರವೊಂದು ಆರಂಭವಾಗಲಿದೆ. “ಕವಲುದಾರಿ”, ” ಆಪರೇಷನ್ ಅಲುಮೇಲಮ್ಮ” ಚಿತ್ರಗಳ ಮೂಲಕ ಜನಪ್ರಿಯರಾಗಿ ತಮ್ಮದೇ ಆದ ಅಭಿಮಾನಿ ವಲಯ ಹೊಂದಿರುವ ರಿಷಿ ಈ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದಾರೆ.
ರಾಕಡ್ ಫಿಲಂಸ್ ಮುಂಬೈ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಜೊಯ್ ದೀಪ್ ಬಿಸ್ವಾಸ್ ಹಾಗೂ ಸೋನಾಲಿ ಬಿಸ್ವಾಸ್ ನಿರ್ಮಾಣಕ್ಕೆ ಸಾಥ್ ನೀಡುತ್ತಿದ್ದಾರೆ. ವಸಂತ್ ಹಂಗೆ ಮತ್ತು ಕೆ.ಸಿ.ಶಿವಾನಂದ್ ಈ ನೂತನ ಚಿತ್ರದ ಸಹ ನಿರ್ಮಾಪಕರು.ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ, ಮೂಲತಃ ಕನ್ನಡಿಗರೆ ಆಗಿರುವ ಕಿಶೋರ್ ಭಾರ್ಗವ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಈಗಾಗಲೇ ತೆಲುಗು ಚಿತ್ರವೊಂದನ್ನು ನಿರ್ದೇಶಿಸಿರುವ ಕಿಶೋರ್ ಭಾರ್ಗವ್ ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಮುಂಗಾರು ಕಳೆದ ಮೇಲೆ ಆಗಸ್ಟ್ ನಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ತಿಳಿಸಿರುವ ನಿರ್ಮಾಪಕ ಪ್ರಮೋದ್ ನಾರಾಯಣ್, ಸದ್ಯದಲ್ಲೇ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.
Disney hotstar ನಿರ್ಮಾಣದ “ಸೈತಾನ್” ವೆಬ್ ಸಿರೀಸ್ ಮೂಲಕ ರಿಷಿ ತೆಲುಗಿನಲ್ಲೂ ಹೆಸರು ಮಾಡಿದ್ದಾರೆ. ತಮಿಳುನಾಡಿನಲ್ಲೂ ರಿಷಿ ಜನಪ್ರಿಯ. ಎಲ್ಲಾ ಭಾಷೆಗಳ ಅಭಿಮಾನಿಗಳಿಗೂ ಪ್ರಿಯವಾಗುವಂತಹ ಕಥೆ ನಮ್ಮ ಚಿತ್ರದಲ್ಲಿರುತ್ತದೆ ಎನ್ನುತ್ತಾರೆ ನಿರ್ಮಾಪಕ ಪ್ರಮೋದ್ ನಾರಾಯಣ್.