ವಿಜಯವಾಡ: ಆಂಧ್ರಪ್ರದೇಶ ಅಪರಾಧ ತನಿಖಾ ಇಲಾಖೆ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ವಿರುದ್ಧ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ದಾಖಲಿಸಿದೆ.
ಇದು ನಾಯ್ಡು ವಿರುದ್ಧ ರಾಜ್ಯ ತನಿಖಾ ಸಂಸ್ಥೆ ದಾಖಲಿಸಿದ ನಾಲ್ಕನೇ ಪ್ರಕರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಸೋಮವಾರ ಎಸಿಬಿ ವಿಶೇಷ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದಾರೆ.
ನಾಯ್ಡು, ಮಾಜಿ ಅಬಕಾರಿ ಸಚಿವ ಕೊಲ್ಲು ರವೀಂದ್ರ ಮತ್ತು ಆಂಧ್ರಪ್ರದೇಶ ಸ್ಟೇಟ್ ಬೆವರೇಜಸ್ ಕಾರ್ಪೋರೇಷನ್ ಲಿಮಿಟೆಡ್ (ಎಪಿಎಸ್ಬಿಸಿಎಲ್) ಮಾಜಿ ಕಮಿಷನರ್ ನರೇಶ್ ವಿರುದ್ಧ, ಕೆಲವು ಪೂರೈಕೆದಾರರು ಮತ್ತು ಡಿಸ್ಟಿಲರಿಗಳಿಗೆ ಅನುಕೂಲ ಮಾಡಿಕೊಟ್ಟು, ಮದ್ಯದ ಪರವಾನಗಿ ನೀಡಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಮತ್ತೊಂದೆಡೆ ಇಂದು ಆಂಧ್ರ ಪ್ರದೇಶ ಹೈಕೋರ್ಟ್ ಚಂದ್ರಬಾಹು ನಾಯ್ಡು ಅವರಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.ನವೆಂಬರ್ 24ರವರೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅನಾರೋಗ್ಯದಿಂದಿರುವ ನಾಯ್ಡು ಅವರು ಚಿಕಿತ್ಸೆ ಪಡೆಯಲು ಜಾಮೀನು ಮಂಜೂರು ಮಾಡಿರುವುದಾಗಿ ಹೇಳಲಾಗಿದೆ. ಸದ್ಯ ನಾಯ್ಡು ಅವರು ರಾಜಮಂಡ್ರಿ ಜೈಲಿನಲ್ಲಿದ್ದಾರೆ.