ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಮುರುಘಾಮಠದ ಮಾಜಿ ಪೀಠಾಧಿಪತಿ ಮುರುಘಾಶ್ರೀಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮುರುಘಾಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದಡಿ ಮುರುಘಾಶ್ರೀ ವಿರುದ್ಧ ಹೊಸದುರ್ಗ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.
ಮುರುಘಾಮಠದ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಅವರು ಈ ಸಂಬಂಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಸರ್ಕಾರದಿಂದ ನೇಮಕಗೊಂಡಿರುವ ಮಠದ ಆಡಳಿತ ಸಮಿತಿಗೆ ಪ್ರಕಾಶ್ ಎಂಬುವರಿಂದ ಈ ಬಗ್ಗೆ ದೂರು ಬಂದಿತ್ತು ಈ ಹಿನ್ನೆಲೆಯಲ್ಲಿ ವಿಷಯವನ್ನು ಪರಿಶೀಲಿಸಲಾಗಿದ್ದು, ಬಳಿಕ ಕೋರ್ಟ್ ಮೊರೆ ಹೋಗಲಾಗಿದೆ.
ಕೋರ್ಟ್ ನಿರ್ಬಂಧ ಇದ್ದರೂ ಮುರುಘಾಶ್ರೀ ಅವರು ಹೊಸದುರ್ಗದ ಎಂ. ಮಂಜುನಾಥ್ ಅವರಿಗೆ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ನೀಡಿ, ಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಮಮತಾ ಹಾಗೂ ನಳಿನಿ ಎಂಬವರಿಗೆ ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜ.೩೦ರಂದು ಮುರುಘಾಮಠದ ಆಡಳಿತ ಸಮಿತಿ ಅಧಿಕೃತವಾಗಿ ನ್ಯಾಯಾಲಯವನ್ನು ಸಂಪರ್ಕಿಸಿದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿಯಲಿದೆ.
ಮುರುಘಾಶ್ರೀಗಳಿಗೆ ಮತ್ತೊಂದು ಕಾನೂನು ಸಂಕಷ್ಟ: ೪ ನಿವೇಶನಗಳ ಅಕ್ರಮ ಮಾರಾಟ ಆರೋಪ



