ಕೆ.ನರೇಂದ್ರಬಾಬು ಅವರ ನಿರ್ದೇಶನದ 13 ಚಿತ್ರದ ಟೀಸರ್ ರಾಜ್ಯದ 32 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಯಿತು. ಅಲ್ಲದೆ ದುಬೈ, ಸಿಂಗಪೂರ್ ಸೇರಿದಂತೆ ಅನೇಕ ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ನಿನ್ನೆ ನಡೆದ ಸಮಾರಂಭದಲ್ಲಿ ವಿಶೇಷವಾಗಿ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ ಅಪ್ಪು ಅಭಿಮಾನಿಗಳೇ ಸೇರಿ 13 ಚಿತ್ರದ ಟೀಸರ್ ರಿಲೀಸ್ ಮಾಡಿದರು. ರಾಘವೇಂದ್ರ ರಾಜ್ಕುಮಾರ್, ಶ್ರುತಿ, ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ `13′ ಚಿತ್ರವನ್ನು ಯುವಿ ಪ್ರೊಡಕ್ಷನ್ ಅಡಿಯಲ್ಲಿ ಕೆ. ಸಂಪತ್ ಕುಮಾರ್, ಹೆಚ್.ಎಸ್. ಮಂಜುನಾಥ್, ಮಂಜುನಾಥಗೌಡ ಹಾಗೂ ಸಿ.ಕೇಶವಮೂರ್ತಿ ಸೇರಿ ನಿರ್ಮಿಸುತ್ತಿದ್ದಾರೆ.
ರಾಘವೇಂದ್ರ ರಾಜ್ಕುಮಾರ್ ನಿವೃತ್ತ ಸೈನಿಕ ಹಾಗೂ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಪಾತ್ರದಲ್ಲಿ ಮತ್ತು ಟೀ ಅಂಗಡಿ ನಡೆಸುವ ಸಾಯಿರಾಬಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಶ್ರುತಿ ಅವರು ನಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡದೆ ಒಂದು ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ನಿರ್ದೇಶಕರು ಈ ಚಿತ್ರಕಥೆಯನ್ನು ಹೆಣೆದಿದ್ದಾರೆ.
ವೇದಿಕೆಯಲ್ಲಿ ನಿರ್ದೇಶಕ ನರೇಂದ್ರಬಾಬು ಮಾತನಾಡುತ್ತ ’13’ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡುವಾಗ ತುಂಬಾ ಕಹಿಘಟನೆಗಳು ನಡೆದಿವೆ. ಆದರೂ ಎಲ್ಲವನ್ನೂ ಮರೆತು ಯಶಸ್ಸು ಕಂಡಿದ್ದೇವೆ. ನನ್ನ ಒಂಭತ್ತನೆಯ ಚಿತ್ರದಲ್ಲಿ ರಾಘಣ್ಣ ಅಭಿನಯಿಸಿರುವ ಖುಷಿಯಿದೆ. ಇದೇ ಖುಷಿಯಲ್ಲಿ 13 ಚಿತ್ರದ ಹಬ್ಬವನ್ನು 6 ದಿನಗಳ ಕಾಲ ಆಚರಿಸುತ್ತಿದ್ದೇವೆ. ಮೂರು ಹಿಂದುಳಿದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ರಿನೋವೇಶನ್ ಮಾಡಿಸುತ್ತಿದ್ದೇವೆ. ಹಾವೇರಿ ಜಿಲ್ಲೆಯ ಶಾಲೆಯೊಂದರಿಂದ ಈ ಕೆಲಸ ಪ್ರಾರಂಭವಾಗಲಿದೆ. ಬಡ ಮಕ್ಕಳಿಗೆ ಬ್ಯಾಗ್, ಪುಸ್ತಕಗಳನ್ನು ವಿತರಿಸುತ್ತಿದ್ದೇವೆ.
ಈ ಕೆಲಸಕ್ಕೆ ನಮ್ಮಜೊತೆ ಸಮಾಜಸೇವಕ ಅನಿಲ್ ಕುಮಾರ್ ಅವರು ಕೈಜೋಡಿಸಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳ ರೂವಾರಿ ರಾಘಣ್ಣ ಎಂದು ಹೇಳಿನಿರ್ಮಾಪಕ ಕೆ. ಸಂಪತ್ಕುಮಾರ್ ಮಾತನಾಡಿ ನಿರ್ದೇಶಕರ ಮೇಲೆ ನಂಬಿಕೆಯಿದೆ. ಅವರಜೊತೆ ಇದು ಎರಡನೇ ಸಿನಿಮಾ. ಡೇ ಒನ್ ನಿಂದಲೂ ಈ ಸಿನಿಮಾ ಗೆದ್ದೇ ಗೆಲ್ಲುತ್ತೆ ಎಂಬ ನಂಬಿಕೆಯಿದೆ. ಗೋವಿಂದ ಗೋಪಾಲ, ಸಾಫ್ಟ್ವೇರ್ ಗಂಡ ಸೇರಿ ನನ್ನ ನಿರ್ಮಾಣದ 5ನೇ ಚಿತ್ರವಿದು. ಅಮೃತವಾಹಿ ನಿ ನಂತರ ಬಾಬು ಜೊತೆ ಎರಡನೇ ಚಿತ್ರ. ಮುಂದಿನ ದಿನಗಳಲ್ಲಿ ಪ್ರೊಮೋಷನ್ ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ಹೇಳಿಕೊಂಡರು. ಇನ್ನು ಇವರ ಜತೆ ಕೈಜೋಡಿಸಿರುವ ಮಂಜುನಾಥ್ಗೌಡ, ಕೇಶವಮೂರ್ತಿ ಹಾಗೂ ಮಂಜುನಾಥ್ ಚಿತ್ರದ ಕುರಿತಂತೆ ಮಾತನಾಡಿದರು.
ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಮಂಜುನಾಥ್ ನಾಯ್ಡು ಅವರ ಛಾಯಾಗ್ರಹಣ ಹಾಗೂ ಸೋಹನ್ ಬಾಬು ಅವರ ಸಂಗೀತ ಈ ಚಿತ್ರಕ್ಕಿದೆ.
Leave a Review