ಸೋನಿಪತ್: ತಾಯಿಯಾದ ನಂತರ ಕಳೆದ ವರ್ಷ ಇಡೀ ಋತುವನ್ನು ಕಳೆದುಕೊಂಡಿದ್ದ ವಿಶ್ವದ ಮಾಜಿ ನಂಬರ್ ಒನ್ ಆರ್ಚರಿ ಪಟು ದೀಪಿಕಾ ಕುಮಾರಿ ಅವರು ಮುಂಬರುವ ವಿಶ್ವಕಪ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್ಗಾಗಿ ಇಲ್ಲಿ ನಡೆಯುತ್ತಿರುವ ಆಯ್ಕೆ ಟ್ರಯಲ್ಸ್ನಲ್ಲಿ ಅಗ್ರಸ್ಥಾನ ಪಡೆದರು.
2022ರಲ್ಲಿ ತಾಯಿಯಾದ ಅವರು, 20 ತಿಂಗಳು ಸ್ಪರ್ಧಾಕಣದಿಂದ ದೂರವಿದ್ದು ಫೆಬ್ರುವರಿಯಲ್ಲಿ ಏಷ್ಯಾ ಕಪ್ನ ಬಾಗ್ದಾದ್ ಲೆಗ್ನಲ್ಲಿ ಕಣಕ್ಕೆ ಇಳಿದಿದ್ದ ದೀಪಿಕಾ ಅವರು ಎರಡು ಚಿನ್ನ ಗೆದ್ದಿದ್ದರು. ದೀಪಿಕಾ ಅವರನ್ನು ಒಳಗೊಂಡ ನಾಲ್ಕು ಸದಸ್ಯರ ತಂಡದಲ್ಲಿ ಭಜನ್ ಕೌರ್, ಅಂಕಿತಾ ಭಕತ್ ಮತ್ತು ಕೋಮಲಿಕಾ ಬಾರಿ ಇದ್ದಾರೆ.
ಪುರುಷರ ವಿಭಾಗದಲ್ಲಿ ಪ್ಯಾರಿಸ್ ಒಲಿಂಪಿಕ್ ಕೋಟಾವನ್ನು ಪಡೆದಿರುವ ಏಕೈಕ ಭಾರತೀಯ ಧೀರಜ್ ಬೊಮ್ಮದೇವರ ಅವರು ರಿಕರ್ವ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದರು. ತರುಣದೀಪ್ ರೈ, ಪ್ರವೀಣ್ ಜಾಧವ್ ಮತ್ತು ಮೃಣಾಲ್ ಚೌಹಾಣ್ ಪುರುಷರ ರಿಕರ್ವ್ ತಂಡದ ಇತರ ಸದಸ್ಯರಾಗಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ಗಾಗಿ ಮಹಿಳಾ ವಿಭಾಗದಲ್ಲಿ ಭಾರತವು ಇನ್ನೂ ಕೋಟಾವನ್ನು ಪಡೆದುಕೊಂಡಿಲ್ಲ. ಜುಲೈ ಮತ್ತು ಆಗಸ್ಟ್ನಲ್ಲಿ ಒಲಿಂಪಿಕ್ಸ್ ನಡೆಯಲಿದೆ.